ಸೂಪರ್‍ಬೈಕ್ ರೇಸಿಂಗ್ ವೇಳೆ ಯುವಕ ಸಾವು- ಅಪಘಾತದ ದೃಶ್ಯ ಕ್ಯಾಮೆರಾದಲ್ಲಿ ಸೆರೆ

 

ನವದೆಹಲಿ: 24 ವರ್ಷದ ಯುವಕನೊಬ್ಬ ತನ್ನ ಇಬ್ಬರು ಸ್ನೇಹಿತರೊಂದಿಗೆ ರೇಸಿಂಗ್ ಮಾಡುವ ವೇಳೆ ಅಪಘಾತವಾಗಿ ಮೃತಪಟ್ಟ ಘಟನೆ ಸೋಮವಾರದಂದು ದೆಹಲಿಯಲ್ಲಿ ನಡೆದಿದೆ.

ಸ್ಪೀಡ್ ರೇಸ್‍ನ ದೃಶ್ಯ ಹಾಗೂ ಇಲ್ಲಿನ ಮಂಡಿ ಹೌಸ್ ಮೆಟ್ರೋ ಸ್ಟೇಷನ್ ಬಳಿ ನಡೆದ ಅಪಘಾತದ ಸಂಪೂರ್ಣ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೃತ ಯುವಕ ಹಿಮಾಂಶು ಬನ್ಸಲ್ ಜೊತೆಗೆ ರೇಸಿಂಗ್ ಹೋಗಿದ್ದ ಸ್ನೇಹಿತರಲ್ಲೊಬ್ಬ ವಿಡಿಯೋ ಮಾಡುತ್ತಿದ್ದಾಗ ಅಪಘಾತದ ದೃಶ್ಯವೂ ಸೆರೆಯಾಗಿದೆ.

ಮೂವರು ಸ್ನೇಹಿತರು ಪಾರ್ಟಿ ಮುಗಿಸಿಕೊಂಡು ಬೈಕ್‍ನಲ್ಲಿ ಅತೀ ವೇಗದಲ್ಲಿ ಸೆಂಟ್ರಲ್ ದೆಹಲಿಯ ಕೊನ್ನಾಟ್ ಪ್ಲೇಸ್‍ನಿಂದ ಮಂಡಿ ಹೌಸ್ ಕಡೆಗೆ ಹೋಗುತ್ತಿದ್ರು ಅಂತ ಪೊಲೀಸರು ಹೇಳಿದ್ದಾರೆ.

ಮೃತ ಯುವಕ ಹಿಮಾಂಶು ಬನ್ಸಲ್ ಬೆನೆಲ್ಲಿ ಟಿಎನ್‍ಟಿ 600ಐ ಬೈಕ್ ಚಾಲನೆ ಮಾಡುತ್ತಿದ್ದು, ಮತ್ತೊಬ್ಬ ಸವಾರನಿಗಿಂತ ಮುಂದಿದ್ದ. ಹಿಂದಿದ್ದ ಸವಾರ 300ಸಿಸಿ ಯ ಕವಾಸಾಕಿ ನಿಂಜಾ 300 ಬೈಕ್‍ನಲ್ಲಿ ಬರ್ತಿದ್ದು, ಆತನ ಹೆಲ್ಮೆಟ್‍ಗೆ ಆಕ್ಷನ್ ಕ್ಯಾಮೆರಾವೊಂದನ್ನ ಅಳವಡಿಸಲಾಗಿತ್ತು. ಹೀಗಾಗಿ ರೇಸ್‍ನ ದೃಶ್ಯ ಆ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಲಾಗ್ತಿತ್ತು. ಮೂರನೇ ಬೈಕ್ ಸವಾರ ಬೆನೆಲ್ಲಿ ಟಿಎನ್‍ಟಿ 600ಐನ 600ಸಿಸಿ ಬೈಕ್‍ನಲ್ಲಿ ಬರುತ್ತಿದ್ದ. ಈ ಎಲ್ಲಾ ಬೈಕ್‍ಗಳು ತುಂಬಾ ದುಬಾರಿಯಾಗಿದ್ದು 4ರಿಂದ 6 ಲಕ್ಷ ರೂ ಬೆಲೆಯದ್ದಾಗಿವೆ. ಕೆಲವೇ ಸೆಕೆಂಡ್‍ಗಳಲ್ಲಿ ಗಂಟೆಗೆ 200 ಕಿಮೀ ವರೆಗೆ ಗರಿಷ್ಠ ವೇಗವನ್ನ ತಲುಪಬಹುದಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮೃತ ಸವಾರ ಹಿಂಮಾಂಶು ದೆಹಲಿಯ ವಿವೇಕ್ ವಿಹಾರ್‍ನ ಉದ್ಯಮಿಯೊಬ್ಬರ ಮಗ ಎಂದು ಅವರು ಹೇಳಿದ್ದಾರೆ.

ಕವಾಸಾಕಿ ನಿಂಜಾ 300ಬೈಕ್ ಸವಾರನ ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೋದಲ್ಲಿ ಹಿಮಾಂಶು ಟ್ರಾಫಿಕ್ ನಡುವೆ ಅತೀ ವೇಗವಾಗಿ ಹೋಗುತ್ತಿರೋದನ್ನ ಕಾಣಬಹುದು. ಅಲ್ಲದೆ ಕೆಲವು ಬಾರಿ ಅಪಾಯಕರ ರೀತಿಯಲ್ಲಿ ಓವರ್ ಟೇಕ್ ಕೂಡ ಮಾಡೋದನ್ನ ನೋಡಬಹುದು.

ವೇಗವಾಗಿ ಚಲಾಯಿಸುತ್ತಿದ್ದಾಗ ಮೆಟ್ರೋ ಹೌಸ್ ಸ್ಟೇಷನ್ ಬಳಿ ವ್ಯಕ್ತಿಯೊಬ್ಬರು ರಸ್ತೆ ದಾಡುತ್ತಿದ್ದು, ಈ ವೇಳೆ ಹಿಮಾಂಶು ಡಿಕ್ಕಿ ತಪ್ಪಿಸಲು ಯತ್ನಿಸಿ ಕೊನೆಗೆ ವ್ಯಕ್ತಿಗೆ ಗುದ್ದಿದ್ದಾನೆ. ಬೈಕ್ ನಿಯಂತ್ರಣ ತಪ್ಪಿ ಎಡಕ್ಕೆ ಹೋಗಿ ಬಿದ್ದಿದೆ. ಹಿಂಮಾಂಶು ಬೈಕ್‍ನಿಂದ ಹೊರಗೆಸೆಯಲ್ಪಟ್ಟು, ಲೇಡಿ ಇರ್ವಿನ್ ಕಾಲೇಜ್‍ನ ಸೈಡ್‍ವಾಕ್‍ಗೆ ಡಿಕ್ಕಿಯಾಗಿದ್ದಾನೆ. ಬೈಕ್ ಕೆಲವು ಮೀಟರ್ ಮುಂದಕ್ಕೆ ಹೋಗಿ ಬಿದ್ದಿದೆ.

ಘಟನೆ ನಂತರ ಹಿಮಾಂಶುವನ್ನ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದ್ರೂ ಅದಾಗಲೇ ತಡವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *