24 ಗಂಟೆಯಲ್ಲಿ 8 ಮಂದಿ ಭಯೋತ್ಪಾದಕರನ್ನ ಹೊಡೆದುರುಳಿಸಿದ ಭದ್ರತಾ ಪಡೆ

– ಮಸೀದಿಯಲ್ಲಿ ಅಡಗಿದ್ದ ಉಗ್ರರು

ಶ್ರೀನಗರ: ಕಳೆದ 24 ಗಂಟೆಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಎಂಟು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ.

ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಪ್ರದೇಶದಲ್ಲಿ ಮೂವರು ಮತ್ತು ಶೋಪಿಯಾನ್ ಜಿಲ್ಲೆಯಲ್ಲಿ ಐವರು ಭಯೋತ್ಪದಕರು ಸಾವನ್ನಪ್ಪಿದ್ದಾರೆ. ಅವಂತಿಪೋರಾ ಪ್ರದೇಶದ ಮೀನ್ ಗ್ರಾಮದಲ್ಲಿ ಗುರುವಾರ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಭಯೋತ್ಪಾದಕ ಸಾವನ್ನಪ್ಪಿದ್ದನು.

ಇನ್ನಿಬ್ಬರು ಭಯೋತ್ಪದಕರು ಹತ್ತಿರದ ಮಸೀದಿಗೆ ಪ್ರವೇಶಿಸಿ ಅದರೊಳಗೆ ಆಶ್ರಯ ಪಡೆದಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಪೈಕಿ ಶುಕ್ರವಾರ ಬೆಳಗ್ಗೆ ಭದ್ರತಾ ಪಡೆಗಳು ಮಸೀದಿಯಲ್ಲಿ ಅಡಗಿದ್ದ ಇಬ್ಬರನ್ನು ಉಗ್ರರನ್ನು ಹತ್ಯೆ ಮಾಡಿದೆ. ಧಾರ್ಮಿಕ ಸ್ಥಳವಾಗಿದ್ದರಿಂದ ಯಾವುದೇ ಗುಂಡಿನ ದಾಳಿ ಅಥವಾ ಐಇಡಿ (ಸ್ಫೋಟಕ ಸಾಧನ) ಬಳಸಲಾಗಿಲ್ಲ ಎಂದು ಕಾಶ್ಮೀರದ ಪೊಲೀಸ್ ಇನ್ಸ್ ಪೆಕ್ಟರ್ ಜನರಲ್ ವಿಜಯ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಭದ್ರತಾ ಪಡೆ ತಾಳ್ಮೆ ಮತ್ತು ವೃತ್ತಿಪರತೆಯಿಂದ ಕೆಲಸ ಮಾಡಿದೆ. ಗುಂಡಿನ ದಾಳಿ ಮತ್ತು ಐಇಡಿ ಬಳಕೆ ಮಾಡಿಲ್ಲ. ಭಯೋತ್ಪಾದಕರು ಅನಿವಾರ್ಯವಾಗಿ ಮಸೀದಿಯಿಂದ ಹೊರಗೆ ಬರುವಂತೆ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗಿತ್ತು. ಉಗ್ರರು ಹೊರಗೆ ಬರುತ್ತಿದ್ದಂತೆ ಭದ್ರತಾ ಪಡೆ ಹೊಡೆದುರುಳಿಸಿವೆ. ಈ ಮೂಲಕ ಮಸೀದಿಯ ಪಾವಿತ್ರ್ಯತೆಯನ್ನು ಕಾಪಾಡಲಾಗಿದೆ ಎಂದು ಕಾಶ್ಮೀರದ ಪೊಲೀಸ್ ಮುಖ್ಯಸ್ಥ ದಿಬ್ಬಾಗ್ ಸಿಂಗ್ ತಿಳಿಸಿದರು.

ದಾಳಿ ನಡೆದ ಸಂದರ್ಭದಲ್ಲಿ ಧಾರ್ಮಿಕ ಕಟ್ಟಡಕ್ಕೆ ಯಾವುದೇ ಹಾನಿಯಾಗಿಲ್ಲ. ಹೀಗಾಗಿ ಮಸೀದಿಗೆ ಹಾನಿಯಾಗದಂತೆ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದರಿಂದ ಸ್ಥಳೀಯರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶೋಪಿಯಾನ್ ಜಿಲ್ಲೆಯಲ್ಲಿ ಇಂದು ನಡೆದ ಕಾರ್ಯಾಚರಣೆಯಲ್ಲಿ ಐವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಹತ್ಯೆಗೀಡಾದ ಭಯೋತ್ಪಾದಕರು ಜೈಶ್-ಎ-ಮುಹಮ್ಮದ್ ಸಂಘಟನೆಗೆ ಸೇರಿದವರು ಎಂದು ಗುರುತಿಸಲಾಗಿದೆ.

Comments

Leave a Reply

Your email address will not be published. Required fields are marked *