ಮುಂಬೈ: ಮದುವೆ ಸಂಭ್ರಮದಲ್ಲಿದ್ದ ವೈದ್ಯೆಯೊಬ್ಬರು ಶಾಪಿಂಗ್ ಮಾಡಿಕೊಂಡು ಸಹೋದರನ ಜೊತೆ ಸ್ಕೂಟರ್ ನಲ್ಲಿ ಬರುತ್ತಿದ್ದ ವೇಳೆ ರಸ್ತೆ ಗುಂಡಿಯಿಂದಾಗಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ ದುರಂತ ಘಟನೆ ಮುಂಬೈನಲ್ಲಿ ನಡೆದಿದೆ.
ಪಾಲ್ಗಾರ್ ನಿವಾಸಿಯಾದ ಡಾ. ನೇಹಾ ಶೇಕ್(23) ಅಪಘಾತದಲ್ಲಿ ಸಾವನ್ನಪ್ಪಿದ ವೈದ್ಯೆ. ನೇಹಾ ಹಾಗೂ ಅವರ ಸಹೋದರ ಭಿವಾಂಡಿಗೆ ಹೋಗಿ ಶಾಪಿಂಗ್ ಮುಗಿಸಿಕೊಂಡು ಸ್ಕೂಟರ್ ನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದರು. ರಾತ್ರಿ 10:30ರ ವೇಳೆಗೆ ಗಣೇಶ ಪುರಿಯ ಪ್ರದೇಶದಲ್ಲಿ ಸಾಗುತ್ತಿದ್ದಾಗ ರಸ್ತೆಯಲ್ಲಿದ್ದ ಗುಂಡಿಯಿಂದಾಗಿ ಸ್ಕೂಟರ್ ಸ್ಕಿಡ್ ಆಗಿದೆ. ಪರಿಣಾಮ ನೇಹಾ ದೂರಕ್ಕೆ ಹಾರಿ ಬಿದ್ದಿದ್ದಾರೆ. ಅದೇ ಸಮಯಕ್ಕೆ ವೇಗದಿಂದ ಬರುತ್ತಿದ್ದ ಟ್ರಕ್ ಅವರ ಮೇಲೆ ಹರಿದು ಹೋಗಿದ್ದು, ವೈದ್ಯೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸವಾರೆ ಮೃತಪಟ್ಟಿದ್ದನ್ನು ನೋಡಿ ಭಯಗೊಂಡ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಇತ್ತ ಆವರ ಸಹೋದರ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದು, ಸ್ಥಳೀಯರು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಳೆದ ಜುಲೈನಿಂದ ಈವರೆಗೆ ರಸ್ತೆ ಗುಂಡಿಯಿಂದ ಅಪಘಾತಕ್ಕೀಡಾಗಿ ಮುಂಬೈನಲ್ಲಿ ಬರೋಬ್ಬರಿ 50 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮುಂದಿನ ತಿಂಗಳು ನೇಹಾ ಅವರ ಮದುವೆ ನಿಶ್ಚಯವಾಗಿತ್ತು. ಆದ್ದರಿಂದ ಮದುವೆ ತಯಾರಿಯಲ್ಲಿದ್ದ ಅವರ ಕುಟುಂಬ ಲಗ್ನ ಪತ್ರಿಕೆಯನ್ನು ಹಂಚಲು ಆರಂಭಿಸಿತ್ತು. ಆದರೆ ನೇಹಾ ಸಾವು ಸಂಭ್ರಮದ ವಾತಾವರಣದಲ್ಲಿದ್ದ ಮನೆಯಲ್ಲಿ ಸೂತಕ ಛಾಯೆ ತಂದಿದೆ. ಈ ಅಪಘಾತಕ್ಕೆ ಸ್ಥಳೀಯರು ಹಾಗೂ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ರಸ್ತೆ ಎಲ್ಲ ಗುಂಡಿಮಯವಾಗಿದೆ. ಪ್ರತಿ ದಿನ ದ್ವಿಚಕ್ರ ವಾಹನ ಸವಾರರು ಸ್ಕಿಡ್ ಆಗಿ ರಸ್ತೆಗೆ ಬೀಳುತ್ತಿದ್ದಾರೆ. ಇದಕ್ಕೆ ರಸ್ತೆ ಗುತ್ತಿಗೆದಾರರೇ ನೇರ ಹೊಣೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಿಡಿದೆದ್ದಿದ್ದಾರೆ.

ಭಾರೀ ವಾಹನಗಳ ಅತಿಯಾದ ವೇಗ, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೇ ವಾಹನ ಓಡಿಸುವುದು ಕೂಡ ಅಪಘಾತ ಹೆಚ್ಚಾಗಲು ಕಾರಣವಾಗಿದೆ. ಜೊತೆಗೆ ಪಿಡಬ್ಲೂಡಿ ಅಧಿಕಾರಿಗಳು ಕಾಮಗಾರಿ ಸರಿಯಾಗಿ ಮಾಡದೇ ನಿರ್ಲಕ್ಷ್ಯ ತೋರಿರುವುದು ಕೂಡ ಅಪಘಾತಗಳಿಗೆ ಕಾರಣ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಸದ್ಯ ಟ್ರಕ್ ಚಾಲಕನ ವಿರುದ್ಧ ಗಣೇಶಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply