ಮಾಹಾಮಾರಿ ಕೊರೊನಾಗೆ 23 ದಿನದ ಕಂದಮ್ಮ ಬಲಿ

ಮನಿಲಾ: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 23 ದಿನದ ಹಸುಗೂಸು ಸಾವನ್ನಪ್ಪಿರುವ ಪ್ರಕರಣ ಫಿಲಿಪ್ಪೀನ್ಸ್ ನ ದಕ್ಷಿಣ ಮನಿಲಾದಲ್ಲಿ ವರದಿಯಾಗಿದೆ.

ದಕ್ಷಿಣ ಮನಿಲಾದ 70 ಕಿಮೀ ದೂರದಲ್ಲಿರುವ ಲಿಪಾ ಪಟ್ಟಣದಲ್ಲಿ ಏಪ್ರಿಲ್ 5 ರಂದು 23 ದಿನದ ಮಗು ಸಾವನ್ನಪ್ಪಿತ್ತು. ಆದರೆ ಮಗು ಸಾವನ್ನಪ್ಪಲು ಕಾರಣವೇನು ಎಂಬುದು ತಿಳಿದು ಬಂದಿರಲಿಲ್ಲ. ಗುರುವಾರ ಮಗುವಿನ ವೈದ್ಯಕೀಯ ಪರೀಕ್ಷಾ ವರದಿ ಬಂದಿದ್ದು, ಮಗುವಿಗೆ ಕೊರೊನಾ ಸೋಂಕು ತಗುಲಿತ್ತು ಎಂಬುದು ಬೆಳಕಿಗೆ ಬಂದಿದೆ.

ಈ ಹಿಂದೆ ಬುಧವಾರ ಬ್ರೆಜಿಲ್‍ನಲ್ಲಿ ಅವಧಿ ಪೂರ್ವವಾಗಿ ಹುಟ್ಟಿದ್ದ 4 ದಿನದ ಶಿಶು ಸಾವನ್ನಪ್ಪಿರುವುದು ವರದಿಯಾಗಿತ್ತು. ಶ್ವಾಸಕೋಶ ವೈಫಲ್ಯದಿಂದ ಮಗು ಮೃತಪಟ್ಟಿತ್ತು. ಈ ಪ್ರಕರಣ ವರದಿಯಾದ ಒಂದು ದಿನದ ಬಳಿಕ ಅಂದರೆ ಗುರುವಾರ ಬೊಲಿವಿಯಾದಲ್ಲಿ ಐಸಿಯುನಲ್ಲಿ ಇರಿಸಿದ್ದ 5 ತಿಂಗಳ ಮಗು ಕೊರೊನಾದಿಂದ ಮೃತಪಟ್ಟಿತ್ತು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಫಿಲಿಪ್ಪೀನ್ಸ್ ನ ಆರೋಗ್ಯ ಇಲಾಖೆ ಗುರುವಾರ ಪ್ರಕಟ ಮಾಡಿದ್ದ ದೈನಂದಿನ ಬುಲೆಟಿನ್‍ನಲ್ಲಿ ಲಿಪಾದಲ್ಲಿ ಮೃತಪಟ್ಟ ಮಗುವಿನ ಬಗ್ಗೆ ಉಲ್ಲೇಖಿಸಿದೆ. ಗುರುವಾರ ರಾತ್ರಿವರೆಗೆ ಫಿಲಿಪ್ಪೀನ್ಸ್ ನಲ್ಲಿ 4,076 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದೆ. ಅದರಲ್ಲಿ 203 ಮಂದಿ ಸಾವನ್ನಪ್ಪಿದ್ದು, 124 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ದೇಶದ ಅತೀ ದೊಡ್ಡ ಲುಜಾನ್ ದ್ವೀಪವನ್ನು ಮಾರ್ಚ್ 17ರಿಂದ ಏಪ್ರಿಲ್ 12ರವರೆಗೆ ಸಂಪೂರ್ಣ ಲಾಕ್‍ಡೌನ್ ಮಾಡಲಾಗಿದೆ.

Comments

Leave a Reply

Your email address will not be published. Required fields are marked *