ರೈತನ ಮಗ 23 ವರ್ಷದ ನೀರಜ್ ಚೋಪ್ರಾ ಚಿನ್ನದ ಸಾಧನೆ

NEERAJ

– 12ರ ವಯಸ್ಸಿನಲ್ಲೇ 90 ಕೆ.ಜಿ ಇದ್ದ ನೀರಜ್

ನವದೆಹಲಿ: 23 ವರ್ಷದ ರೈತನ ಮಗ ನೀರಜ್ ಚೋಪ್ರಾ ಇಂದು ಟೋಕಿಯೋ ಒಲಿಂಪಿಕ್ಸ್ ನ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ.

ಈ ಮೂಲಕ ಇಲ್ಲಿಯವರೆಗೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತ ಮಾಡದ ಸಾಧನೆಯನ್ನು ಸಾಧ್ಯವಾಗಿಸಿದ್ದಾರೆ. ಇದೀಗ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದು, ಶತಕೋಟಿ ಭಾರತೀಯರ ಕನಸು ನನಸಾಗುವಂತೆ ಮಾಡಿದ್ದಾರೆ.

ನೀರಜ್ ಚೋಪ್ರಾ ಅವರು ಹರಿಯಾಣದ ಪಾಣಿಪತ್ ಬಳಿಯ ಖಂಡ್ರಾ ಗ್ರಾಮದವರು. ಕೂಡು ಕುಟುಂಬದಿಂದ ಬಂದ ನೀರಜ್ ಚೋಪ್ರಾ, ಮನೆಯಲ್ಲಿ 16 ಜನರಿದ್ದಾರೆ. ನೀರಜ್ ತಂದೆ ಕೃಷಿ ಮಾಡುತ್ತಿದ್ದು, ಮನೆಯವರು ಸಾಧಾರಣ ಕೆಲಸ ಹಾಗೂ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಪಾಕೆಟ್ ಮನಿಯಿಂದಲೇ ಸಲಕರಣೆಗಳನ್ನು ಖರೀದಿಸಿ ನೀರಜ್ ಅಭ್ಯಾಸ ಮಾಡುತ್ತಿದ್ದರು.


ನೀರಜ್ ಚೋಪ್ರಾ ಅವರು ಕುರುಕ್ಷೇತ್ರ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದು, ಭಾರತೀಯ ಸೇನೆಯಲ್ಲಿ ಸುಬೇದಾರ್ ಕೆಲಸ ಮಾಡುತ್ತಿದ್ದಾರೆ. ನೀರಜ್ ತಮ್ಮ 12ನೇ ವಯಸ್ಸಿನಲ್ಲಿ 90 ಕೆ.ಜಿ ತೂಕ ಹೊಂದಿದ್ದರು. ಬಳಿಕ ಕುಟುಂಬದವರ ಒತ್ತಾಯದ ಮೇರೆಗೆ ಜಿಮ್ ಮಾಡಿ, ಫಿಟ್ನೆಸ್ ಕಾಪಾಡಿಕೊಂಡರು. ನಂತರ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಆಸ್ಟ್ರೇಲಿಯಾದಲ್ಲಿ ನಡೆದ 2018ರ ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದ ಬಳಿಕ ಒಲಿಂಪಿಕ್ಸ್ ಗಾಗಿ ತಯಾರಿ ನಡೆಸಿದ್ದರು. ಅಲ್ಲದೆ ನೀರಜ್ ಚೋಪ್ರಾ ಪೋಲೆಂಡ್‍ನಲ್ಲಿ ನಡೆದ ಅಂಡರ್ 20 ಜೂನಿಯರ್ ವರ್ಲ್ಡ್ ಚಾಂಪಿಯನ್‍ಶಿಪ್ 2016ರಲ್ಲಿ 86.48 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೆ ನೀರಜ್ ಚೋಪ್ರಾ ಅವರ ಉತ್ತಮ ಎಸೆತ 88.07 ಮೀಟರ್ ಎಂದು ನೀರಜ್ ಚಿಕ್ಕಪ್ಪ ಭೀಮಸೇನ ಚೋಪ್ರಾ ಅವರು ತಿಳಿಸಿದ್ದಾರೆ.


ಇಂದು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಎರಡನೇ ಎಸೆತದಲ್ಲೇ 87.58 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಅಥ್ಲೆಟಿಕ್ ಲೋಕ ನಿಬ್ಬೆರಗಾಗುವಂತೆ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *