21 ವರ್ಷ ಗಡಿ ಕಾದು ಬಂದ ಯೋಧನಿಗೆ ಅದ್ಧೂರಿ ಸ್ವಾಗತ

ಚಿಕ್ಕಮಗಳೂರು: 21 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯ ಬಳಿಕ ಗ್ರಾಮಕ್ಕೆ ಬಂದ ಬಿಎಸ್‍ಎಫ್ ಯೋಧರೊಬ್ಬರಿಗೆ ಗ್ರಾಮಸ್ಥರು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ ಅದ್ಧೂರಿ ಸ್ವಾಗತ ಕೋರಿದ್ದಾರೆ. ಜಿಲ್ಲೆಯ ಕಡೂರು ತಾಲೂಕಿನ ಎಸ್.ಬಿದರೆ ಗ್ರಾಮದ ಚಂದ್ರಶೇಖರ್ ಕಳೆದ 21 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಕಾಶ್ಮೀರ, ಪಂಜಾಬ್, ಪಶ್ಚಿಮ ಬಂಗಾಳ, ಪಾಕಿಸ್ತಾನದ ಗಡಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸ್ವದೇಶಕ್ಕೆ ಬೆನ್ನು ಮಾಡಿ ಶತ್ರುಗಳಿಗೆ ಎದೆಯೊಡ್ಡಿ ಸೇವೆ ಸಲ್ಲಿಸಿ ಹಿಂದಿರುಗಿದ್ದರು.

ಚಂದ್ರಶೇಖರ್ ಬರುವ ವಿಷಯ ತಿಳಿದ ಗ್ರಾಮದ ಯುವಕರು ಹಾಗೂ ಬಾಲ್ಯ ಸ್ನೇಹಿತರು ಪಿಕಪ್ ಗಾಡಿಗೆ ಮಧುವಣಗಿತ್ತಿಯಂತೆ ಬಣ್ಣ-ಬಣ್ಣದ ಹೂಗಳಿಂದ ಅಲಂಕಾರ ಮಾಡಿ ಕಾದು ಕೂತಿದ್ದರು. ಯೋಧ ಚಂದ್ರು ಗ್ರಾಮದ ದ್ವಾರಬಾಗಿಲಿಗೆ ಬರುತ್ತಿದ್ದಂತೆ ಹೂವಿನ ಹಾರ ಹಾಕಿ ತಬ್ಬಿ ಮುದ್ದಾಡಿದ್ದಾರೆ. ತೆರೆದ ವಾಹನದಲ್ಲಿ ಊರಿನ ತುಂಬಾ ಮೆರವಣಿಗೆ ಮಾಡಿದ್ದಾರೆ. ಯೋಧ ಚಂದ್ರಶೇಖರ್ ಗ್ರಾಮಕ್ಕೆ ಬರುತ್ತಿದ್ದಂತೆ ಗ್ರಾಮಸ್ಥರು, ಶಾಲಾಮಕ್ಕಳು ಜೈಕಾರದೊಂದಿಗೆ ಘೋಷಣೆ ಕೂಗಿ ಬರಮಾಡಿಕೊಂಡಿದ್ದಾರೆ.

ಕಾಶ್ಮೀರದ ಹಿಮಪಾತದಲ್ಲಿ ಸಿಲುಕಿ ಮೂರು ದಿನ ಒಂದು ಲೀಟರ್ ನೀರು ಕುಡಿದು ಬದುಕಿದ್ದ ಘಟನೆಯನ್ನ ಹೇಳಿಕೊಳ್ಳುವ ಮೂಲಕ ಗಡಿ ಕಾಯೋ ಯೋಧರು ಹೇಗೆಲ್ಲಾ ಕಷ್ಟ ಪಡುತ್ತಾರೆ ಅನ್ನೋದನ್ನ ನಿವೃತ್ತಿಯ ನಂತರ ಚಂದ್ರು ಗ್ರಾಮದಲ್ಲಿ ತಮ್ಮ ಅನುಭವವನ್ನು ಚಂದ್ರಶೇಖರ್ ಹಂಚಿಕೊಂಡರು. ಮುಂದಿನ ದಿನಗಳಲ್ಲೂ ನಾನು ಯೋಧನಾಗುತ್ತೇನೆ ಎಂದು ನಮ್ಮ ಗ್ರಾಮ ಸೇರಿ ಸುತ್ತಮುತ್ತಲಿನ ಗ್ರಾಮದ ಯಾರೇ ಬಂದರೂ ಅವರಿಗೆ ಟ್ರೈನಿಂಗ್ ನೀಡೋದಕ್ಕೂ ನಾನು ಸಿದ್ಧ ಎಂದಿದ್ದಾರೆ. ಇದನ್ನೂ ಓದಿ: ಅಂಗೈ ಮೇಲೆ ವೀರ ಯೋಧನನ್ನ ಬರಮಾಡ್ಕೊಂಡ ಗ್ರಾಮಸ್ಥರು

ಓರ್ವ ಯೋಧ ಸೇನೆಯಲ್ಲಿ ಸಲ್ಲಿಸಿ ಬಂದು ನನ್ನ ಬದುಕು ಸಾರ್ಥಕ ಎಂದು ಭಾವಿಸುತ್ತಾರೆ. ಚಳಿ-ಮಳೆ-ಗಾಳಿ-ಬಿಸಿಲು ಯಾವುದನ್ನೂ ಲೆಕ್ಕಿಸದೆ ಗಡಿ ಕಾಯೋ ಹೆಮ್ಮೆಯ ಯೋಧರಿಗೆ ಈ ರೀತಿಯ ಸ್ವಾಗತ ಸಿಕ್ಕಾಗ ಅವರ ಸಂತೋಷಕ್ಕೆ ಪಾರವೇ ಇರೋದಿಲ್ಲ. ಎಸ್. ಬಿದರೆ ಗ್ರಾಮದ ಚಂದ್ರು ಮುಖದಲ್ಲಿ ಆ ಸಾರ್ಥಕ ಹಾಗೂ ಸಂತೋಷದ ಭಾವ ವ್ಯಕ್ತವಾಗಿತ್ತು.

Comments

Leave a Reply

Your email address will not be published. Required fields are marked *