ದೆಹಲಿ ನಾಗರಿಕರಿಗೆ 25 ಲಕ್ಷ ಆರೋಗ್ಯ ವಿಮೆ: ಪ್ಯಾರಿದೀದಿ ಬಳಿಕ ಕಾಂಗ್ರೆಸ್‌ನಿಂದ ಎರಡನೇ ಗ್ಯಾರಂಟಿ

ನವದೆಹಲಿ: ವಿಧಾನಸಭೆ ಚುನಾವಣೆ (Delhi Election) ಹಿನ್ನೆಲೆಯಲ್ಲಿ ಕಾಂಗ್ರೆಸ್‌ (Congress) ತನ್ನ ಎರಡನೇ ಗ್ಯಾರಂಟಿ ಘೋಷಿಸಿದೆ. ಪಕ್ಷ ಅಧಿಕಾರಕ್ಕೆ ಬಂದಲ್ಲಿ ದೆಹಲಿ ನಿವಾಸಿಗಳಿಗೆ ಕಾಂಗ್ರೆಸ್‌ ಜೀವನ್ ರಕ್ಷಾ ಹೆಸರಿನಲ್ಲಿ 25 ಲಕ್ಷ ರೂ. ರೂಪಾಯಿಯ ವಿಮೆ ನೀಡಲಾಗುವುದು ಎಂದು ಮಾಜಿ ಸಿಎಂ ಅಶೋಕ್ ಗೆಹ್ಲೋಟ್ (Ashok Gehlot) ತಿಳಿಸಿದ್ದಾರೆ.

ದೆಹಲಿಯ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೆಹಲಿಯಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದರೆ, ದೆಹಲಿಯ ಪ್ರತಿಯೊಬ್ಬ ನಾಗರಿಕರಿಗೂ 25 ಲಕ್ಷ ರೂಪಾಯಿಗಳ ಆರೋಗ್ಯ ವಿಮೆ ಸಿಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: 20 ಸಾವಿರದಲ್ಲಿ 18 ದಿನಗಳ ಉತ್ತರ ಭಾರತ ಪ್ರವಾಸ – MSIL ಟೂರ್‌ ಪ್ಯಾಕೇಜ್‌ಗೆ ಎಂಬಿಪಿ ಚಾಲನೆ

 

ಮಾಹಿತಿ ಪ್ರಕಾರ, ಜೀವನ ರಕ್ಷಾ ಯೋಜನೆಯಡಿ (Jeevan Raksha Yojana) ದೆಹಲಿಯ ಎಲ್ಲಾ ನಾಗರಿಕರು 25 ಲಕ್ಷ ರೂಪಾಯಿಗಳ ಆರೋಗ್ಯ ವಿಮೆಯನ್ನು ಪಡೆಯುತ್ತಾರೆ ಅಂದರೆ 25 ಲಕ್ಷದವರೆಗೆ ಉಚಿತ ಚಿಕಿತ್ಸೆ ಇರುತ್ತದೆ. ಈ ಹಿಂದೆ ದೆಹಲಿಯ ಮಹಿಳೆಯರಿಗೆ ಪ್ಯಾರಿ ದೀದಿ ಯೋಜನೆಯಡಿ ಪ್ರತಿ ತಿಂಗಳು 2,500 ರೂ. ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು.

ಪ್ಯಾರಿ ದೀದಿ ಯೋಜನೆ ಕುರಿತು ಮಾಹಿತಿ ನೀಡಿದ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ದೆಹಲಿಯಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುವ ಸಂಪೂರ್ಣ ವಿಶ್ವಾಸವಿದೆ ಮತ್ತು ಮಹಿಳೆಯರಿಗೆ 2,500 ರೂ.ಗಳನ್ನು ನೀಡುತ್ತೇವೆ ಇದನ್ನು ಮೊದಲ ಕ್ಯಾಬಿನೆಟ್ ಸಭೆಯಲ್ಲಿಯೇ ಕರ್ನಾಟಕದ ಮಾದರಿಯಲ್ಲಿ ಘೋಷಿಸಲಾಗುವುದು ಎಂದು ತಿಳಿಸಿದ್ದರು.

 

ಆಪ್ ಈಗಾಗಲೇ ಸಂಜೀವಿನಿ ಹೆಸರಿನಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಉಚಿತ ಚಿಕಿತ್ಸೆಯ ಭರವಸೆ ನೀಡಿದೆ, ಮಹಿಳಾ ಸಮ್ಮಾನ್ ಹೆಸರಿನಲ್ಲಿ 2,100 ರೂ. ನೀಡುವುದಾಗಿ ಹೇಳಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ತನ್ನ ಗ್ಯಾರಂಟಿ ಘೋಷಿಸುತ್ತಿದೆ. ಕಾಂಗ್ರೆಸ್‌ ಇನ್ನಷ್ಟು ಗ್ಯಾರಂಟಿ ಘೋಷಿಸುವ ಸಾಧ್ಯತೆ ಇದೆ. ಫೆ.5 ರಂದು 70 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು ಫೆ.8 ರಂದು ಫಲಿತಾಂಶ ಪ್ರಕಟವಾಗಲಿದೆ.