ಜೆಡಿಎಸ್‍ಗೆ ಬಿಡಲ್ಲ, ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ರಮ್ಯಾ ಕಣಕ್ಕೆ: ತಾಯಿ ರಂಜಿತಾ

ಮಂಡ್ಯ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಅವರೇ ಮಂಡ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ನಿಲ್ಲಲಿದ್ದಾರೆ ಎಂದು ತಾಯಿ ರಂಜಿತಾ ಸ್ಪಷ್ಟಪಡಿಸಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಪಾಲ್ಗೊಂಡಿದ್ದ ವೇಳೆ ಮಾತನಾಡಿದ ಅವರು, ರಮ್ಯಾ ಅವರು ಸ್ಥಳೀಯ ನಾಯಕರಿಗೆ ಚುನಾವಣೆ ನೇತೃತ್ವ ವಹಿಸಿಕೊಳ್ಳಲು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಕೆಲಸದಲ್ಲಿ ತುಂಬಾ ಬ್ಯುಸಿಯಾಗಿರುವುದರಿಂದ ಅವರು ಬರಲು ಸಾಧ್ಯವಾಗದ್ದಕ್ಕೆ ನನ್ನನ್ನು ಚುನಾವಣಾ ಪ್ರಚಾರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಹೀಗಾಗಿ ಪ್ರತಿಯೊಬ್ಬ ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದೇವೆ 35 ವಾರ್ಡ್‍ಗಳಲ್ಲೂ ಪ್ರಚಾರಕ್ಕೆ ಹೋಗಿ ನಮ್ಮ ಪಕ್ಷದ ಬಗ್ಗೆ ತಿಳಿಸುತ್ತೇವೆ ಎಂದು ಹೇಳಿದರು.

ರಮ್ಯಾ ಮಂಡ್ಯಕ್ಕೆ ಬಂದು 1 ವರ್ಷವಾಗಿದ್ದು ಪ್ರಚಾರಕ್ಕೆ ಬರುತ್ತಿಲ್ಲ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿ, ಇಮೇಲ್, ಫೋನ್ ಮುಖಾಂತರ ಎಲ್ಲರೊಂದಿಗೆ ರಮ್ಯಾ ಸಂಪರ್ಕದಲ್ಲಿದ್ದಾರೆ. ಮಂಡ್ಯದ ಎಲ್ಲ ವಿಷಯ ಅವರು ತಿಳಿದುಕೊಳ್ಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿಟ್ಟುಕೊಡಬಾರದು. ಕಾಂಗ್ರೆಸ್ ಕಾರ್ಯಕರ್ತರೆಲ್ಲ ನಮಗಾಗಿ ಕಾಯುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಚೆನ್ನಾಗಿ ಕೆಲಸ ಮಾಡುತ್ತಿದೆ. ಹಾಗೆಂದ ಮಾತ್ರಕ್ಕೆ ಮಂಡ್ಯ ಜಿಲ್ಲೆಯನ್ನು ಜೆಡಿಎಸ್‍ಗೆ ಬಿಟ್ಟುಕೊಡುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸ್ಪರ್ಧೆಯಿದೆ. ಒಂದು ವೇಳೆ ಸ್ಪರ್ಧಿಸದೇ ಇದ್ದರೆ ಕಾಂಗ್ರೆಸ್ ಕಾರ್ಯಕರ್ತರನ್ನು ಕೇಳುವವರೇ ಇಲ್ಲದಂತಾಗುತ್ತಾರೆ. ರಮ್ಯಾ ಮತ್ತೆ ಗೆಲ್ಲುವ ಮೂಲಕ ಮಂಡ್ಯ ಜನರ ಸೇವೆ ಮಾಡುತ್ತಾರೆ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿಯಾಗಿ ಮಂಡ್ಯ ಕ್ಷೇತ್ರದಲ್ಲಿ ದಳಕ್ಕೆ ಬಿಟ್ಟು ಕೊಡಲು ನಾವು ತಯಾರಿಲ್ಲ. ನೂರಕ್ಕೆ ನೂರು ಮಂಡ್ಯದ ಕ್ಷೇತ್ರದ ಲೋಕಸಭೆ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದಿಂದ ರಮ್ಯಾ ಸ್ಪರ್ಧಿಸುತ್ತಾರೆ. ಶೀಘ್ರದಲ್ಲೇ ರಮ್ಯಾ ಮಂಡ್ಯಕ್ಕೆ ವಾಪಸ್ಸಾಗುತ್ತಾರೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *