ಹೆಲ್ಮೆಟ್‌ ಧರಿಸದೇ ಅಪ್ರಾಪ್ತ ಬಾಲಕ ಬೈಕ್‌ ಚಲಾಯಿಸಿದ್ದಕ್ಕೆ ಬಿತ್ತು 20 ಸಾವಿರ ರೂ. ದಂಡ

ಶಿವಮೊಗ್ಗ: ಹೆಲ್ಮೆಟ್‌ (Helmet) ಧರಿಸದೇ ಅಪ್ರಾಪ್ತ ಬಾಲಕ ಬೈಕ್‌ ಚಾಲನೆ ಮಾಡಿದ ತಪ್ಪಿಗೆ 20 ಸಾವಿರ ರೂ. ದಂಡ ವಿಧಿಸಿ ತೀರ್ಥಹಳ್ಳಿ ನ್ಯಾಯಾಲಯ (Thirthahalli Court) ತೀರ್ಪು ನೀಡಿದೆ.

ಅಪ್ರಾಪ್ತ ಬಾಲಕ ಬೈಕ್‌ ಚಾಲನೆ ಮಾಡಿದ್ದಷ್ಟೇ ಅಲ್ಲ, ಹೆಲ್ಮೆಟ್‌ ಧರಿಸದೇ ಬೈಕ್‌ ಚಲಾಯಿಸಿ ನಿಯಮ ಉಲ್ಲಂಘಿಸಿದ್ದ. ತೀರ್ಥಹಳ್ಳಿ ಡಿವೈಎಸ್‌ಪಿ ಗಜಾನನ ವಾಮನ ಸುತರ ಅವರು ವಾಹನ ಪರಿಶೀಲನೆ ನಡೆಸಿದ್ದರು. ಇದನ್ನೂ ಓದಿ: ಬೈಕ್‌ ಸ್ಕಿಡ್‌ ಆಗಿ ಡಿವೈಡರ್‌ಗೆ ಡಿಕ್ಕಿ – ಕಾನೂನು ವಿದ್ಯಾರ್ಥಿ ದುರ್ಮರಣ

ತೀರ್ಥಹಳ್ಳಿಯ ಕುಶಾವತಿ ಬಳಿ ಡಿವೈಎಸ್‌ಪಿ ವಾಹನ ತಪಾಸಣೆ ‌ನಡೆಸುತ್ತಿದ್ದರು. ವಾಹನ ತಪಾಸಣೆ ವೇಳೆ ಹೆಲ್ಮೆಟ್ ಧರಿಸದೇ ಅಪ್ರಾಪ್ತ ಬೈಕ್ ಚಾಲನೆ ಮಾಡಿರುವುದು ಪತ್ತೆಯಾಗಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕಳ್ಳಿಗದ್ದೆ ಗ್ರಾಮದ ಪ್ರಮೋದ್ ಎಂಬವರಿಗೆ ಸೇರಿದ ಬೈಕ್ ಇದು ಎಂಬುದು ನಂತರ ತಿಳಿದುಬಂದಿದೆ.

ಪೊಲೀಸರು ಘಟನೆ ಬಗ್ಗೆ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ನ್ಯಾಯಾಧೀಶರು ವಿಚಾರಣೆ ನಡೆಸಿದ್ದರು. ಅಪ್ರಾಪ್ತನಿಗೆ ಬೈಕ್ ಕೊಟ್ಟಿದ್ದಕ್ಕೆ ಮಾಲೀಕನಿಗೆ 20 ಸಾವಿರ ದಂಡ ವಿಧಿಸಿ ಕೋರ್ಟ್‌ ತೀರ್ಪು ನೀಡಿದೆ. ಇದನ್ನೂ ಓದಿ: ಬೆಂ-ಮೈ ಹೆದ್ದಾರಿಯಲ್ಲಿ ಭೀಕರ ಅಪಘಾತ – ಮೂವರ ಸಾವು, ಓರ್ವನ ಸ್ಥಿತಿ ಗಂಭೀರ

ಇದೇ ಮಾದರಿಯ ಪ್ರಕರಣ 2022ರಲ್ಲಿ ತೀರ್ಥಹಳ್ಳಿಯಲ್ಲಿ ನಡೆದಿತ್ತು. ಬಾಲಕನಿಗೆ ಬೈಕ್ ಓಡಿಸಲು ಕೊಟ್ಟ ತಂದೆಗೆ ಕೋರ್ಟ್ 25 ಸಾವಿರ ರೂ. ದಂಡ ವಿಧಿಸಿತ್ತು.