ಚಿಕ್ಕಬಳ್ಳಾಪುರದಲ್ಲಿ ಎಟಿಎಂ ಒಡೆದು ಹಣ ದೋಚಲು ಖದೀಮರ ಸ್ಕೆಚ್ – ಹೈದರಾಬಾದಿನಲ್ಲಿ ಅಲರ್ಟ್

– ಕಳ್ಳರನ್ನು ರೆಡ್ ಹ್ಯಾಂಡಾಗಿ ಹಿಡಿದ ಮ್ಯಾನೇಜರ್

ಚಿಕ್ಕಬಳ್ಳಾಪುರ: ಎಟಿಎಂ ಒಡೆದು ಹಣ ದೋಚಲು ಯತ್ನಿಸಿದ ಇಬ್ಬರು ಖದೀಮರು ರೆಡ್ ಹ್ಯಾಂಡಾಗಿ ಮ್ಯಾನೇಜರ್ ಕೈಗೆ ಸಿಕ್ಕಿಬಿದ್ದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೊಟೆ ಕ್ರಾಸ್‍ನಲ್ಲಿ ನಡೆದಿದೆ.

ಜಂಗಮಕೋಟೆ ಕ್ರಾಸ್‍ನಲ್ಲಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ ಎಟಿಎಂ ಸೆಂಟರ್‍ಗೆ ರಾತ್ರಿ 10.30ರ ವೇಳೆ ನುಗ್ಗಿದ ಖದೀಮರು, ಮೊದಲು ಸಿಸಿಟಿವಿ ಒಡೆದು ಹಾಕಿ, ತದನಂತರ ಎಟಿಎಂ ಒಡೆದು ಹಣ ದೋಚಲು ಪ್ರಯತ್ನಿಸಿದ್ದರು. ಆದರೆ ಖದೀಮರ ಕೃತ್ಯ ದೂರದ ಹೈದರಾಬಾದಿನಲ್ಲಿ ಮಾನಿಟರಿಂಗ್ ಮಾಡುತ್ತಿದ್ದ ಬ್ಯಾಂಕ್‍ನ ಮಾನಿಟಿರಿಂಗ್ ಡಿಪಾರ್ಟಮೆಂಟ್‍ಗೆ ತಿಳಿದಿದ್ದು, ಮಾಹಿತಿ ಸಿಕ್ಕಿ ಕೂಡಲೇ ಸ್ಥಳೀಯ ಬ್ಯಾಂಕಿನ ಮ್ಯಾನೇಜರ್ ಸೌರಬ್ ಸಿನ್ಹಾರಿಗೆ ತಿಳಿಸಲಾಯಿತು.

ಕೂಡಲೇ ರಾತ್ರಿ 11 ಗಂಟೆ ಸುಮಾರಿಗೆ ಎಟಿಎಂ ಬಳಿ ಬಂದು ದೂರದಿಂದ ನೋಡಿದ ಮ್ಯಾನೇಜರಿಗೆ ಇಬ್ಬರು ಖದೀಮರು ಮುಖಕ್ಕೆ ಮಾಸ್ಕ್ ಧರಿಸಿ ಎಟಿಎಂ ಒಡೆಯುತ್ತಿರುವ ಶಬ್ದ ಕೇಳಿಬಂದಿದೆ. ಇದರಿಂದ ಎಚ್ಚೆತ್ತ ಮ್ಯಾನೇಜರ್ ಸ್ಥಳೀಯರ ಸಹಾಯ ಪಡೆದು ಇಬ್ಬರು ಖದೀಮರನ್ನ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.

ಬಂಧಿತರು ಬೆಂಗಳೂರು ಮೂಲದ ಮಹಮದ್ ಇರ್ಫಾನ್ ಖಾನ್ ಹಾಗೂ ಶಾಬಾಜ್ ಖಾನ್ ಎಂದು ಗುರುತಿಸಲಾಗಿದೆ. ಸದ್ಯ ಬಂಧಿತರನ್ನ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *