ಪಾಕಿಸ್ತಾನದಲ್ಲಿ ಗುಂಡಿಕ್ಕಿ ಸಿಖ್ಖರ ಹತ್ಯೆ – ಭಾರತ ತೀವ್ರ ಖಂಡನೆ

POLICE

ಇಸ್ಲಾಮಾಬಾದ್: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರದೇಶದ ಉಪನಗರವಾದ ಪೇಶಾವರದ ಸರ್ಬಂದ್ ಪ್ರದೇಶದಲ್ಲಿ ಸಿಖ್ ಸಮುದಾಯಕ್ಕೆ ಸೇರಿದ ಇಬ್ಬರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ.

ಗುಂಡಿನ ದಾಳಿಗೆ ಬಲಿಯಾದವರನ್ನು ಸಲ್ಜೀತ್ ಸಿಂಗ್ (42) ಹಾಗೂ ರಂಜೀತ್‌ಸಿಂಗ್ (38) ಎಂದು ಗುರುತಿಸಲಾಗಿದೆ. ಈ ಇಬ್ಬರೂ ತಮ್ಮ ಅಂಗಡಿಯಲ್ಲಿ ಕುಳಿತಿದ್ದಾಗ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಆರೋಪಿಗಳನ್ನು ಬಂಧಿಸಲು ಪ್ರದೇಶವನ್ನು ಸುತ್ತುವರಿದಿದ್ದಾರೆ ಎಂದು ಸ್ಥಳೀಯ ಸುದ್ದಿಸಂಸ್ಥೆ ವರದಿ ಮಾಡಿದೆ.

ಭಾರತ ತೀವ್ರ ಖಂಡನೆ: ಸಿಖ್ ಸಮುದಾಯದ ವ್ಯಾಪಾರಿಗಳ ಹತ್ಯೆಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಪ್ರತಿಭಟನೆಯನ್ನೂ ದಾಖಲಿಸಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್‌ಮಾನ್, ಮಾಜಿ ಸಿಎಂ ಅಮರಿಂದರ್ ಸಿಂಗ್ ಹಾಗೂ ಭಾರತದ ವಿದೇಶಾಂಗ ಸಚಿವಾಲಯವೂ ತೀವ್ರವಾಗಿ ಖಂಡಿಸಿದೆ. ಇದನ್ನೂ ಓದಿ: ಥಾಮಸ್ ಕಪ್ ಗೆದ್ದ ಭಾರತ ತಂಡದೊಂದಿಗೆ ಇಡೀ ದೇಶವೇ ಸಂಭ್ರಮಿಸಿದೆ: ಮೋದಿ

ಘಟನೆ ಕುರಿತು ಮಾತನಾಡಿರುವ ವಿದೇಶಾಂಗ ಸಚಿವಾಲಯದ ವಕ್ತಾರರು, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯದ ಸದಸ್ಯರನ್ನು ಗುರಿಯಾಗಿಸಿಕೊಂಡು ಸರಣಿ ಹತ್ಯೆ ಮುಂದುವರಿದಿದೆ. ಈ ಹತ್ಯೆ ಬಗ್ಗೆ ಪಾಕಿಸ್ತಾನ ಸರ್ಕಾರದ ವಿರುದ್ಧ ಬಲವಾದ ಪ್ರತಿಭಟನೆ ದಾಖಲಿಸಿದ್ದೇವೆ. ಈ ವಿಷಯವನ್ನು ಪ್ರಾಮಾಣಿಕವಾಗಿ ತನಿಖೆ ಮಾಡಲು ಹಾಗೂ ಕೃತ್ಯ ಎಸಗಿದ ನೀಚರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಾವು ಕರೆ ನೀಡುತ್ತೇವೆ ಎಂದು ಹೇಳಿದ್ದಾರೆ.

ಪಾಕಿಸ್ತಾನ ಸರ್ಕಾರವು ತನ್ನ ಜವಾಬ್ದಾರಿಗಳನ್ನು ನಿರ್ವಹಿಸುತ್ತದೆ. ಅಲ್ಪಸಂಖ್ಯಾತ ಸಮುದಾಯಗಳ ಸುರಕ್ಷತೆ, ಭದ್ರತೆ ಹಾಗೂ ಯೋಗಕ್ಷೇಮವನ್ನು ನೋಡಿಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಥಾಮಸ್‌ ಕಪ್‌ ಬ್ಯಾಡ್ಮಿಂಟನ್‌ – ಭಾರತ ಚಾಂಪಿಯನ್‌, ಇತಿಹಾಸ ಸೃಷ್ಟಿ

ಪಾಕ್ ಪ್ರಧಾನಿ ಶೆಹಬಾಜ್ ಸಹ ಇದಕ್ಕೆ ಪ್ರತಿಕ್ರಿಯಿಸಿದ್ದು, ಹತ್ಯೆಯ ಹಿಂದಿನ ಸತ್ಯಾಂಶಗಳನ್ನು ತಿಳಿಯಲು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಹಂತಕರನ್ನು ಬಂಧಿಸಿ ತಕ್ಕ ಶಿಕ್ಷೆ ವಿಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಸಿಖ್ಖರ ಸುರಕ್ಷತೆ ಖಚಿತಪಡಿಸಿಕೊಳ್ಳಿ: ಪಂಜಾಬ್ ಸಿಎಂ ಭಗವಂತ್ ಮಾನ್, ಪಾಕಿಸ್ತಾನದ ಪೇಶಾವರದಲ್ಲಿ ಇಬ್ಬರು ಸಿಖ್ಖರ ಭೀಕರ ಹತ್ಯೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ನಮ್ಮ ವಿದೇಶಾಂಗ ಸಚಿವರಿಗೂ ನಾನು ವಿನಂತಿಸುತ್ತೇನೆ. ಪಾಕಿಸ್ತಾನದಲ್ಲಿ ನೆಲೆಸಿರುವ ಹಿಂದೂ ಮತ್ತು ಸಿಖ್ ಅಲ್ಪಸಂಖ್ಯಾತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪಾಕಿಸ್ತಾನದೊಂದಿಗೆ ಮಾತನಾಡಬೇಕು ಎಂದು ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.

ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್ ಸಹ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಪಾಕಿಸ್ತಾನದಲ್ಲಿ ಮತ್ತೆ ಸಿಖ್ಖರ ಹತ್ಯೆಯಾಗಿದೆ. ಇದು ಅತ್ಯಂತ ಖಂಡನೀಯ. ನಾನು ಯಾವಾಗಲೂ ಹೇಳುತ್ತಿದ್ದೆ, ಪಾಕಿಸ್ತಾನ ಸರ್ಕಾರ ಸಿಖ್ಖರ ಭದ್ರತೆಯನ್ನು ಖಾತ್ರಿಪಡಿಸದೇ ಅವರಿಗೆ ಕೇವಲ ಆಶ್ವಾಸನೆ ನೀಡುತ್ತಿದೆ ಎಂಬುದನ್ನು ಪುನರುಚ್ಛರಿಸಿದ್ದಾರೆ.

Comments

Leave a Reply

Your email address will not be published. Required fields are marked *