ಮಾಧ್ಯಮಗಳನ್ನು ಕರೆಸಿ ಕುಖ್ಯಾತ ರೌಡಿಗಳನ್ನು ಎನ್‍ಕೌಂಟರ್ ಮಾಡಿದ್ರು ಯುಪಿ ಪೊಲೀಸರು!

ಲಕ್ನೋ: ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಇಬ್ಬರು ಕುಖ್ಯಾತ ರೌಡಿಗಳನ್ನು ಎನ್‍ಕೌಂಟರ್ ಮಾಡಿರುವ ಘಟನೆ ಉತ್ತರ ಪ್ರದೇಶದ ಅಲಿಘಡ ಬಳಿ ಇಂದು ಬೆಳಗ್ಗೆ ನಡೆದಿದೆ.

ಮುಸ್ತಾಕಿಮ್ ಹಾಗೂ ನೌಶಾದ್ ಎನ್‍ಕೌಂಟರ್ ನಲ್ಲಿ ಹತ್ಯೆಯಾದ ರೌಡಿಗಳಾಗಿದ್ದು, ಕಳೆದ ಒಂದು ತಿಂಗಳ ಅವಧಿಯಲ್ಲಿ 6 ಕೊಲೆಯ ಪ್ರಕರಣದಲ್ಲಿ ಇವರು ಆರೋಪಿಗಳಾಗಿದ್ದರು. ಪೊಲೀಸರು ರೌಡಿಗಳ ಎನ್‍ಕೌಂಟರ್ ಮಾಡುವ ಮುನ್ನ ಮಾಧ್ಯಮಗಳನ್ನು ಕರೆದು ಕಾರ್ಯಾಚರಣೆಯನ್ನು ಸೆರೆ ಹಿಡಿಯುವಂತೆ ಹೇಳಿದ್ದು ವಿಶೇಷವಾಗಿತ್ತು.

ನಡೆದಿದ್ದು ಏನು? ಪೊಲೀಸರು ಬೆಳಗ್ಗೆ ಅಲಿಘಡದಲ್ಲಿ ಗಸ್ತು ನಡೆಸುತ್ತಿದ್ದ ವೇಳೆ ವಾಹನಗಳನ್ನು ತಡೆದು ಪರಿಶೀಲನೆ ನಡೆಸಿದ್ದರು. ಈ ಸಮಯದಲ್ಲಿ ಬೈಕಿನಲ್ಲಿ ಬಂದ ಈ ರೌಡಿಗಳು ಪೊಲೀಸರ ಮೇಲೆಯೇ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಬಳಿಕ ರೌಡಿಗಳು ಪೊಲೀಸರಿಂದ ತಪ್ಪಿಸಿಕೊಂಡು ಸರ್ಕಾರಿ ಕಟ್ಟಡವೊಂದನ್ನು ಪ್ರವೇಶಿಸಿ ಅವಿತುಕೊಂಡಿದ್ದರು. ಅಲ್ಲೇ ಅವಿತಿದ್ದರೂ ಈ ರೌಡಿಗಳು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ರೌಡಿಗಳು ಒಳಗಡೆ ಇರುವುದನ್ನು ಖಚಿತಪಡಿಸಿದ ಪೊಲೀಸರು ಆ ಕಟ್ಟಡವನ್ನು ಸುತ್ತುವರಿದಿದ್ದಾರೆ. ಅಷ್ಟೇ ಅಲ್ಲದೇ ಮಾಧ್ಯಮಗಳಿಗೆ ಎನ್ ಕೌಂಟರ್ ಕಾರ್ಯಾಚರಣೆ ಮಾಡುತ್ತಿದ್ದೇವೆ ಸ್ಥಳಕ್ಕೆ ಬನ್ನಿ ಎಂದು ಮಾಹಿತಿ ನೀಡಿದ್ದಾರೆ. ಮಾಧ್ಯಮಗಳು ಸ್ಥಳಕ್ಕೆ ಬಂದ ಬಳಿಕ ಪೊಲೀಸರು ರೌಡಿಗಳಿಗೆ ಶರಣಾಗುವಂತೆ ಸೂಚಿಸಿದ್ದಾರೆ. ಪೊಲೀಸರ ಮನವಿಗೆ ಸ್ಪಂದಿಸದೇ ರೌಡಿಗಳು ಗುಂಡಿನ ದಾಳಿ ನಡೆಸಿ ಪ್ರತಾಪ ತೋರಿಸಿದ್ದಾರೆ. ಮನವಿಗೆ ಬಗ್ಗದ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿದಾಳಿ ನಡೆಸಿ ರೌಡಿಗಳನ್ನು ಹತ್ಯೆ ಮಾಡಿದ್ದಾರೆ.

ಈ ಘಟನೆಯಲ್ಲಿ ಒಬ್ಬ ಪೊಲೀಸ್ ಆಧಿಕಾರಿಯೂ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಅಲಿಘಡ ಪೊಲೀಸ್ ಮುಖ್ಯಸ್ಥ ಅಜಯ್ ಸಾಹ್ನಿ ತಿಳಿಸಿದ್ದಾರೆ. ಕಳೆದ 1 ತಿಂಗಳ ಅವಧಿಯಲ್ಲಿ ಇಬ್ಬರು ಧಾರ್ಮಿಕ ಮುಖಂಡರು ಸೇರಿ 6 ಮಂದಿ ಕೊಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬುಧವಾರ 5 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಇದನ್ನು ಓದಿ: ಯೋಗಿ ಸರ್ಕಾರದ ಎನ್‍ಕೌಂಟರ್ ಎಫೆಕ್ಟ್- ಸೈಕಲ್ ಶಾಪ್, ಹಣ್ಣಿನ ವ್ಯಾಪಾರ, ರಿಕ್ಷಾ ಚಾಲನೆ ಆರಂಭಿಸಿದ ರೌಡಿಶೀಟರ್ ಗಳು

ಉತ್ತರ ಪ್ರದೇಶ ಸರ್ಕಾರ ನೀಡಿರುವ ಮಾಹಿತಿ ಅನ್ವಯ 2017 ಮಾರ್ಚ್ ಬಳಿಕ 66 ಮಂದಿಯನ್ನು ಎನ್‍ಕೌಂಟರ್ ಮಾಡಲಾಗಿದೆ. ಆದರೆ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಸಿಎಂ ಆದ ಬಳಿಕ ಎನ್‍ಕೌಂಟರ್ ಗಳ ಸಂಖ್ಯೆ ಹೆಚ್ಚಾಗಿತ್ತು. ಅಲ್ಲದೇ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿದ್ದ ಹಲವು ಆರೋಪಿಗಳು ಜೈಲು ಸೇರಿದ್ದರು. ಈ ಅವಧಿಯಲ್ಲಿ 500ಕ್ಕೂ ಹೆಚ್ಚು ಮಂದಿ ಎನ್‍ಕೌಂಟರ್ ನಲ್ಲಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಎನ್‍ಕೌಂಟರ್ ಗಳ ಕುರಿತು ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶ ಪೊಲೀಸ್ ಮುಖ್ಯಸ್ಥ ಒಪಿ ಸಿಂಗ್, ಎನ್‍ಕೌಂಟರ್ ಗಳು ಕ್ರಿಮಿನಲ್‍ಗಳನ್ನು ಬಂಧಿಸಲು ಇರುವ ತಂತ್ರಗಾರಿಕೆ ಅಷ್ಟೇ. ಅಲ್ಲದೇ ಇದರಿಂದ ಕ್ರೈಂ ಪ್ರಕರಣಗಳ ಪ್ರಮಾಣ ಕಡಿಮೆಯಾಗಲಿದೆ ಎಂದು ಹೇಳಿ ಪೊಲೀಸರ ಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ.  ಇದನ್ನು ಓದಿನನ್ನ ಅರೆಸ್ಟ್ ಮಾಡಿ, ಎನ್‍ಕೌಂಟರ್ ನಲ್ಲಿ ಸಾಯಲು ಇಷ್ಟವಿಲ್ಲ- ಯುಪಿ ಪೊಲೀಸರಿಗೆ ಕೊಲೆ ಆರೋಪಿ ಶರಣು

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *