ಲೋನ್ ಮಾಡಿಕೊಡುತ್ತೀವೆಂದು ನೆರವಿಗೆ ಬಂದವರೇ ಮೋಸ ಮಾಡಿದ್ರು

– ಬ್ಯಾಂಕ್ ನೊಟಿಸ್ ಬಂದಾಗ್ಲೇ ಮೋಸದ ಅರಿವಾಯ್ತು

ಮಂಗಳೂರು: ಬಡಪಾಯಿ ಜನ ಸಿಕ್ಕರೆ ಹೆಂಗೆಲ್ಲಾ ಮೋಸ ಮಾಡ್ತಾರೆ ಅನ್ನೋದಕ್ಕೆ ಮಂಗಳೂರು ಹೊರವಲಯದ ಫರಂಗಿಪೇಟೆ ಬಳಿಯ ಮೇರ್ಲಪದವಿನ ನೋಯಲ್ ಸಲ್ದಾನಾ ಅವರೇ ಸಾಕ್ಷಿ.

ಕೃಷಿ ಕುಟುಂಬದಿಂದ ಬಂದಿರುವ ಇವರು ಬ್ಯಾಂಕ್ ಲೋನ್ ಪಡೆಯಲೆಂದು ಅಲೆದಾಡುತ್ತಿದ್ದರು. ಹೀಗೆ ಸಾಲ ಬೇಕೆಂದು ತಿರುಗಾಡುತ್ತಿದ್ದಾಗ ಸಂಪರ್ಕಕ್ಕೆ ಸಿಕ್ಕಿದ್ದ ಖದೀಮರಿಬ್ಬರು ಲೋನ್ ಮಾಡಿಕೊಡುತ್ತೇವೆಂದು ನೆರವಿಗೆ ಬಂದಿದ್ದರು. ಆದರೆ, ಜಾಗದ ಮಾಲೀಕರಿಗೆ ಗೊತ್ತಾಗದಂತೆ ಅವರದ್ದೇ ಜಾಗವನ್ನು ಅಡವಿಟ್ಟು ಲಕ್ಷಾಂತರ ರೂಪಾಯಿ ಸಾಲ ಪಡೆದು ವಂಚಿಸಿದ್ದಾರೆ.

ಪಿತ್ರಾರ್ಜಿತ ಆಸ್ತಿಯಲ್ಲಿ ಕೃಷಿ ಮಾಡಿಕೊಂಡಿದ್ದು, ಇದಕ್ಕಾಗಿ ಲೋನ್ ಮಾಡುವ ಪ್ಲಾನ್‍ನಲ್ಲಿದ್ದ ನೋಯಲ್‍ಗೆ ಶೇಖ್ ಅಬ್ದುಲ್ಲಾ, ಅಂಬ್ರೋಸ್ ಡಿಸೋಜ ಪರಿಚಯವಾಗಿದ್ದಾರೆ. ನೋಯಲ್ ಅಮಾಯಕತೆಯನ್ನು ದುರುಪಯೋಗ ಮಾಡಿಕೊಂಡ ಈ ವಂಚಕರು, ಕೃಷಿ ಜಮೀನಿಗೆ ಲೋನ್ ಸಿಗಲ್ಲ ಅಂತ ಕನ್ವರ್ಶನ್ ಮಾಡಿಸಿದ್ದಾರೆ.

ಮಂಗಳೂರಿನ ಕೆನರಾ ಬ್ಯಾಂಕಿನ ನೆಲ್ಲಿಕಾಯಿ ಶಾಖೆಯಿಂದ 36 ಲಕ್ಷ ರೂಪಾಯಿ ನೇರ ಸಾಲ ಮತ್ತು 7 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಇದಕ್ಕಾಗಿ ಗೋಲ್ಡನ್ ಎಂಟರ್‍ಪ್ರೈಸಸ್ ಅನ್ನೋ ನಕಲಿ ಸಂಸ್ಥೆಯನ್ನು ಸೃಷ್ಟಿಸಿ, ನೋಯಲ್ ಖಾತೆಗೆ ಮೂರೂವರೆ ಲಕ್ಷ ಪ್ರತ್ಯೇಕವಾಗಿ ಪಾವತಿಸಿದ್ದಾರೆ. ಅಲ್ಲದೆ, ಬ್ಯಾಂಕ್ ಲೋನ್ ಕಟ್ಟಲೆಂದು ಪ್ರತಿ ತಿಂಗಳು 5 ಸಾವಿರ ರೂ. ಪಡೆಯುತ್ತಿದ್ದರು. ಇದ್ಯಾವುದರ ಮಾಹಿತಿ ಇರದ ನೋಯಲ್‍ಗೆ 2 ವರ್ಷದ ಬಳಿಕ ಬ್ಯಾಂಕ್ ನೋಟಿಸ್ ಬಂದಾಗಲೇ ಮೋಸದ ಅರಿವಾಗಿದೆ.

ಎರಡು ವರ್ಷದಲ್ಲಿ ಅಸಲು ಮತ್ತು ಬಡ್ಡಿ ಸೇರಿ ಒಟ್ಟು ಮೊತ್ತ 50 ಲಕ್ಷ ಆಗಿದ್ದರಿಂದ ಬ್ಯಾಂಕ್‍ನಿಂದ ಜಪ್ತಿ ನೋಟಿಸ್ ಬಂದಿದೆ. ಮೋಸ ಹೋಗಿರೋದು ಅರಿವಾದ ಮೇಲೆ ಮಂಗಳೂರಿನ ಪಿಯುಸಿಎಲ್ ಸಂಘಟನೆ ಮೂಲಕ ಪಾಂಡೇಶ್ವರ ಠಾಣೆಗೆ ನೋಯಲ್ ದೂರು ನೀಡಿದ್ದಾರೆ. ಬಳಿಕ ವಂಚಕರನ್ನು ಪತ್ತೆ ಹೆಚ್ಚಿ ಮನೆಗೆ ಕರೆಸಿಕೊಂಡಿದ್ದಾರೆ. ತಕ್ಷಣವೇ ಇಬ್ಬರು ವಂಚಕರನ್ನೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ಪಿಯುಸಿಎಲ್ ಸಂಘಟನೆ ಸದಸ್ಯ ಈಶ್ವರ್ ರಾಜ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಮೋಸ ಮಾಡುವವರು ಇರೋವರೆಗೂ ಮೋಸ ಹೋಗೋರು ಇರುತ್ತಾರೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ ಆಗಿದೆ.

Comments

Leave a Reply

Your email address will not be published. Required fields are marked *