ವಸತಿ ಶಾಲೆಯ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಡ್ರಗ್ಸ್ ನೀಡಿ ಸಿಬ್ಬಂದಿಯಿಂದ ರೇಪ್!

ಮುಂಬೈ: ವಸತಿ ಶಾಲೆಯೊಂದರಲ್ಲಿ ಓದುತ್ತಿದ್ದ ಬುಡಕಟ್ಟು ಸಮುದಾಯದ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಶಾಲಾ ಸಿಬ್ಬಂದಿಯೇ ಡ್ರಗ್ಸ್ ನೀಡಿ ಅತ್ಯಾಚಾರ ಮಾಡಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ನಡೆದಿದೆ.

ಆರೋಪಿಗಳನ್ನು ವಸತಿ ನಿಯಲದ ಸೂಪರಿಂಟೆಂಡೆಂಟ್ ಚಬನ್ ಪಾಚೇರ್ ಮತ್ತು ಡೆಪ್ಯೂಟಿ ಸೂಪರಿಂಟೆಂಡೆಂಟ್ ನರೇಂದ್ರ ವಿರುತ್ಕರ್ ಎಂದು ಗುರುತಿಸಲಾಗಿದೆ. ಈ ಸಿಬ್ಬಂದಿಯೇ ವಿದ್ಯಾರ್ಥಿಯರಿಗೆ ಡ್ರಗ್ಸ್ ನೀಡಿ ನಶೆ ಬರುವಂತೆ ಮಾಡಿ, ಅಪ್ರಾಪ್ತೆಯರ ಮೇಲೆ ನಿರಂತರ ಅತ್ಯಾಚಾರ ಮಾಡಿದ್ದಾರೆ. ಚಂದ್ರಾಪುರ ಜಿಲ್ಲೆಯ ರಜುರಾ ತಹಸೀಲ್‍ನಲ್ಲಿರುವ ಈ ವಸತಿ ಶಾಲೆ ಕಾಂಗ್ರೆಸ್‍ನ ಮಾಜಿ ಶಾಸಕರಿಗೆ ಸೇರಿದ್ದು, ಖಾಸಗಿ ಸಂಸ್ಥೆಯಿಂದ ನಡೆಸಲ್ಪಡುತ್ತಿದೆ ಎಂದು ವರದಿಯಾಗಿದೆ.

ನಿರಂತರ ಡ್ರಗ್ಸ್ ಸೇವನೆ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಯರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಆಗ ಅವರನ್ನು ಚಂದ್ರಾಪುರ ಸರ್ಕಾರಿ ಆಸ್ಪತ್ರೆಗೆ ತೋರಿಸಿದಾಗ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ ಎಂಬ ವಿಷಯ ಹೊರಬಿದ್ದಿದೆ. ಆಗ ವಸತಿ ನಿಲಯದ ಆಡಳಿತ ಮಂಡಳಿ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸಿದಾಗ ವಸತಿ ನಿಲಯದಲ್ಲಿ ಬಾಲಕಿಯರ ಮೇಲೆ ಸಿಬ್ಬಂದಿಯೇ ಅತ್ಯಾಚಾರ ಮಾಡಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ. ಆರೋಪಿಗಳಾದ ಪಾಚೇರ್ ಮತ್ತು ವಿರುತ್ಕರ್ ಹಾಗೂ ಈ ಕೃತ್ಯದಲ್ಲಿ ಇವರಿಗೆ ಸಹಕರಿಸಿದ ಹಾಸ್ಟೆಲ್ ವಾರ್ಡನ್ ಕಲ್ಪನಾ ಠಾಕ್ರೆ ಮತ್ತು ಸಹಾಯಕಿ ಲತಾ ಕನಕೆ ಅವರನ್ನು ಮಂಗಳವಾರದಂದು ಪೊಲೀಸರು ಬಂಧಿಸಿದ್ದಾರೆ.

ಈ ಸಂಬಂಧ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ ತನಿಖೆ ವೇಳೆಯಲ್ಲಿ ವಸತಿ ಶಾಲೆಯ ಸೂಪರಿಂಟೆಂಡೆಂಟ್ ಕಚೇರಿಯಲ್ಲಿ ಹಲವು ಕಾಂಡೋಮ್‍ಗಳು, ವಯಾಗ್ರಾ ಮಾತ್ರೆಗಳು ದೊರೆತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಹಣಕಾಸು ಸಚಿವ ಹಾಗೂ ಚಂದ್ರಾಪುರ ಜಿಲ್ಲಾ ಉಸ್ತುವಾರಿ ಸಚಿವ ಸುಧೀರ್ ಮುಂಗಂಟಿವಾರ್ ಈ ಬಗ್ಗೆ ಆಳವಾದ ತನಿಖೆ ನಡೆಸುವಂತೆ ಆದೇಶಿಸಿದ್ದು, ಈ ಶಾಲೆಗೆ ನೀಡಲಾಗಿದ್ದ ಸರ್ಕಾರದ ಮಾನ್ಯತೆಯನ್ನು ರದ್ದುಪಡಿಸುವಂತೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *