ಒಳ ಉಡುಪಿನಲ್ಲಿ 4 ಕೆಜಿ ಚಿನ್ನ ಸಾಗಿಸ್ತಿದ್ದ ಮಹಿಳೆಯರು ಮುಂಬೈನಲ್ಲಿ ಅರೆಸ್ಟ್

ಮುಂಬೈ: ತಮ್ಮ ಒಳ ಉಡುಪಿನಲ್ಲಿ 4 ಕೆ.ಜಿ ಯಷ್ಟು ಚಿನ್ನವನ್ನು ಸಾಗಾಟ ಮಾಡುತ್ತಿದ್ದ ಭಾರತೀಯ ಮೂಲದ ಮಹಿಳೆಯರಿಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಮಲೇಷಿಯಾದ ಸಂತಾಲೆತ್ಮಿ ಸುಮಮಾನಂ(41) ಹಾಗೂ ಸಿಂಗಾಪುರದ ಮ್ಯಾಗಿಸ್ವೇರಿ ಜೈರಾಮ್ನ(59) ಬಂಧಿತ ಮಹಿಳೆಯರು.

ಶನಿವಾರ ಈ ಮಹಿಳೆಯರಿಬ್ಬರು ಜೆಟ್ ಏರ್ ವೇಸ್ ಫ್ಲೈಟ್ 9ಢ 009 ಮೂಲಕ 3 ಗಂಟೆ ಸುಮಾರಿಗೆ ಮುಂಬೈ ಏರ್‍ಪೋರ್ಟ್ ಗೆ ಬಂದಿಳಿದಿದ್ದಾರೆ. ಈ ವೇಳೆ ಅಧಿಕಾರಿಗಳು ತಪಾಸಣೆ ಮಾಡಿದಾಗ ಮಹಿಳೆಯರು ತಮ್ಮ ಸೊಂಟ, ಕೈ ಅಡಿ ಹಾಗೂ ಒಳ ಉಡುಪಿನಲ್ಲಿ ಸುಮಾರು 1.2 ಕೋಟಿ ರೂ. ಮೌಲ್ಯದ ಚಿನ್ನ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಅಧಿಕಾರಿಗಳು ವಶಕ್ಕೆ ಪಡೆದು ಬಂಧಿಸಿದ್ದಾರೆ.

ವಿಚಾರಣೆ ವೇಳೆ ಓರ್ವ ಮಹಿಳೆ ತಾನು ಶಾಪಿಂಗ್ ಮುಗಿಸಿ ಬಂದಿದ್ದು, ನಾಳೆ ಸಿಂಗಾಪುರಕ್ಕೆ ತೆರಳಲಿದ್ದೇನೆ ಅಂತ ಅಧಿಕಾರಿಗಳ ಜೊತೆ ಹೇಳಿದ್ದಾಳೆ. ಆದ್ರೆ ಆಕೆಯ ಹೇಳಿಕೆಯಿಂದ ಅಧಿಕಾರಿಗಳಲ್ಲಿ ಸಂಶಯ ವ್ಯಕ್ತವಾಗಿದೆ. ಒಟ್ಟಾರೆ ಇಬ್ಬರು ಮಹಿಳೆಯರಿಂದ ಅಧಿಕಾರಿಗಳು ತಲಾ 2 ಕೆಜಿ ಚಿನ್ನದ ಸರವನ್ನು ಕೂಡ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಈ ಚಿನ್ನವನ್ನು ಸ್ವೀಕರಿಸಲು ವ್ಯಕ್ತಿಯೊಬ್ಬರು ಹೊರಗಡೆ ನಿಂತಿರುವುದಾಗಿ ಮಹಿಳೆಯರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಈ ವಿಚಾರ ತಿಳಿದು ಅಧಿಕಾರಿಗಳು ವಿಮಾನ ನಿಲ್ದಾಣದ ಹೊರಗಡೆ ನಿಂತಿದ್ದ ವ್ಯಕ್ತಿಯನ್ನು ಕೂಡ ವಶಕ್ಕೆ ಪಡೆದಿದ್ದಾರೆ. ಈ ವೇಳೆ `ತಾನು ಸಿಂಗಾಪುರ ಮೂಲದ ವ್ಯಕ್ತಿಯಿಂದ ನಾನು ಚಿನ್ನ ಖರೀದಿಸುತ್ತಿದ್ದೆ. ಆದ್ರೆ ಆತ ಯಾರ ಬಳಿ ಕಳುಹಿಸುತ್ತಿದ್ದಾನೆ ಅಂತ ನನಗೆ ಗೊತ್ತಿಲ್ಲ. ಆತ ಚಿನ್ನ ಕಳುಹಿಸುತ್ತಿರೋ ವ್ಯಕ್ತಿಯ ಫೋಟೋಗಳನ್ನು ನನಗೆ ಮೊಬೈಲ್ ನಲ್ಲಿ ಕಳುಹಿಸುತ್ತಿದ್ದ. ಹೀಗಾಗಿ ನಾನು ಅವರ ಕೈಯಿಂದ ತೆಗೆದುಕೊಳ್ಳಲೆಂದು ಬಂದಿದ್ದೆ. ಆದ್ರೆ ಇದರಲ್ಲಿ ನನ್ನ ತಪ್ಪಿಲ್ಲ ಅಂತ ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದಾನೆ.

ಬಂಧಿತ ಇಬ್ಬರು ಮಹಿಳೆಯರು ಬಹಳ ಬುದ್ಧಿವಂತಿಕೆಯಿಂದ ಚಿನ್ನದ ಸರ ಹಾಗೂ ಕಡಗಗಳನ್ನು ಸಾಗಾಟ ಮಾಡುತ್ತಿದ್ದರು. ಸದ್ಯ ಈ ಇಬ್ಬರು ಮಹಿಳೆಯರು ಹಾಗೂ ಓರ್ವ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಅಂತ ಕಸ್ಟಮ್ಸ್ ಉಪ ಕಮಿಷನರ್ ಎಐಯು ಪ್ರದ್ನ್ಯಾ ಶೀಲ್ ಜುಮ್ಮೆ ಹೇಳಿದ್ದಾರೆ.

ಇನ್ನು ಚಿನ್ನವನ್ನು ಕಳುಹಿಸಿದ ವ್ಯಕ್ತಿ ಈ ಇಬ್ಬರು ಮಹಿಳೆಯರಿಗೆ ಉಳಿದುಕೊಳ್ಳಲೆಂದು ವಿಮಾನ ನಿಲ್ದಾಣದ ಪಕ್ಕದಲ್ಲಿರೋ ಹೊಟೇಲಿನಲ್ಲಿ ರೂಮ್ ಕೂಡ ಬುಕ್ ಮಾಡಿದ್ದನು ಎನ್ನಲಾಗಿದೆ.

Comments

Leave a Reply

Your email address will not be published. Required fields are marked *