ಚಲಿಸುತ್ತಿದ್ದ ಕಾರಿನಲ್ಲಿ ತಂದೆಯೆದುರೇ ಬಾಲಕಿಯರ ಮೇಲೆ ಗ್ಯಾಂಗ್‍ರೇಪ್- ಐವರ ಬಂಧನ

ಗಾಂಧಿನಗರ: ಚಲಿಸುತ್ತಿದ್ದ ಕಾರಿನಲ್ಲಿ ತಂದೆಯ ಎದುರೇ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ 6 ಮಂದಿ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಗುಜರಾತ್‍ನ ದಾಹೊದ್‍ನಲ್ಲಿ ನಡೆದಿದೆ.

ಅಹಮದಾಬಾದ್‍ನಿಂದ 200 ಕಿ.ಮೀ ದೂರದಲ್ಲಿರುವ ದಾಹೊದ್‍ನಲ್ಲಿ ಬುಧವಾರದಂದು ಈ ಘಟನೆ ನಡೆದಿದೆ. 13 ಜನ ಸೇರಿಕೊಂಡು ಈ ಕೃತ್ಯವೆಸಗಲು ಪ್ಲಾನ್ ಮಾಡಿದ್ದರು ಎಂದು ವರದಿಯಾಗಿದೆ. ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ್ದಾರೆ ಎನ್ನಲಾದ 6 ಜನರಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದು, ಒಬ್ಬ ಪರಾರಿಯಾಗಿದ್ದಾನೆ. ಘಟನೆಯಲ್ಲಿ ಪಾತ್ರ ವಹಿಸಿದ್ದಾರೆನ್ನಲಾದ ಇನ್ನುಳಿದ 7 ಮಂದಿ ಕೂಡ ತಲೆಮರೆಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳಲ್ಲಿ ಒಬ್ಬನಾದ ಕುಮಾಟ್ ಬರಿಯಾ ಬಾಲಕಿಯರ ಅಣ್ಣನ ಮೇಲೆ ಸೇಡು ತೀರಿಸಿಕೊಳ್ಳಲು ಈ ಕೃತ್ಯವೆಸಗಿದ್ದಾಗಿ ಹೇಳಿದ್ದಾನೆ. ಈ ಹಿಂದೆ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ ಬಾಲಕಿಯರ ಅಣ್ಣ, ಕುಮಾಟ್ ಬಾರಿಯಾ ತನಗೆ ಮದ್ಯವನ್ನು ಮಾರಾಟ ಮಾಡಿದ್ದನೆಂದು ಹೇಳಿದ್ದು, ಕುಮಾತ್ ಮೇಲೂ ಪೊಲೀಸರು ಪ್ರಕರಣ ದಾಖಲಿಸಿದ್ದರು ಎಂದು ವರದಿಯಾಗಿದೆ. (ಗುಜರಾತ್‍ನಲ್ಲಿ ಮದ್ಯ ಮಾರಾಟದ ಮೇಲೆ ನಿಷೇಧವಿದೆ).

ತನ್ನ ವಿರುದ್ಧ ದೂರು ನೀಡಿದ್ದಕ್ಕೆ ಸೇಡು ತೀರಿಸಿಕೊಳ್ಳಬೇಕೆಂಬ ಉದ್ದೇಶದಿಂದ ಬಾರಿಯಾ ಮತ್ತು ಸಂಗಡಿಗರು ಈ ಕೃತ್ಯವೆಸಗಿದ್ದಾರೆಂದು ಪೊಲೀಸರು ಹೇಳಿದ್ದಾರೆ. ಬುಧವಾರ ಬೆಳಗ್ಗೆ, ಬಾರಿಯಾ ಮತ್ತು ಆತನ ಸಂಗಡಿಗರು ಸೇರಿ ಒಟ್ಟು 13 ಮಂದಿ ಎಸ್‍ಯುವಿ ಕಾರ್ ಮತ್ತು ಬೈಕ್‍ಗಳಲ್ಲಿ ಗ್ರಾಮಕ್ಕೆ ಬಂದಿದ್ದಾರೆ. ಗ್ರಾಮದಲ್ಲಿ ಅಂಗಡಿ ಇಟ್ಟುಕೊಂಡಿದ್ದ ತಂದೆ ಹಾಗೂ ಇಬ್ಬರು ಬಾಲಕಿಯರನ್ನು ಹೊರಗೆಳೆದುಕೊಂಡು ಬಂದು ಕಾರಿಗೆ ಹತ್ತಿಸಿದ್ದಾರೆ. ನಂತರ 6 ಮಂದಿ ಕಾರಿನಲ್ಲಿ ಬಾಲಕಿಯರ ಮೇಲೆ ಅತ್ಯಾಚಾರವೆಸಗಿ, ಸುಮಾರು 25 ಕಿ.ಮೀ ದೂರ ಹೋದ ನಂತರ ಬಾಲಕಿಯರು ಹಾಗೂ ಅವರ ತಂದೆಯನ್ನು ಕಾರಿನಿಂದ ಹೊರಗೆ ತಳ್ಳಿ ಪರಾರಿಯಾಗಿದ್ದಾರೆಂದು ದಾಹೋದ್ ಪೊಲೀಸರು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಅಪಹರಣ ಹಾಗೂ ಸಾಮೂಹಿಕ ಅತ್ಯಾಚಾರದ ಆರೋಪದಡಿ, ಪೋಕ್ಸೋ ಕಾಯ್ದೆಯಡಿ 13 ಜನರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ದಾಹೋದ್ ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *