ಸಿಗರೇಟ್‌ ಸೇದುತ್ತಾ ರಾಷ್ಟ್ರಗೀತೆಗೆ ಅಪಮಾನ ಮಾಡಿದ ಯುವತಿಯರು – ಕೇಸ್‌ ದಾಖಲು

ಕೋಲ್ಕತಾ: ʻರಾಷ್ಟ್ರಗೀತೆʼ (National Anthem) ಎಂದರೆ ದೇಶಭಕ್ತಿ. ದೂರದಲ್ಲಿ ನಿಂತಾಗ ʻಜನ ಗಣ ಮನʼ ಶಬ್ಧ ಸಣ್ಣ ದನಿಯಲ್ಲಿ ಕೇಳಿದರೂ ಸಾಕು ನಿಂತು ಗೌರವ ಸೂಚಿಸುತ್ತೇವೆ. ಇದು ದೇಶದ ಪ್ರತಿಯೊಬ್ಬರ ಮೂಲಭೂತ ಕರ್ತವ್ಯವೂ ಹೌದು. ರಾಷ್ಟ್ರಗೀತೆಗೆ ಯಾರೇ ಅಪಮಾನ ಮಾಡಿದರೂ ಅದು ಶಿಕ್ಷಾರ್ಹ ಅಪರಾಧ.

ಆದರೀಗ ಇಲ್ಲಿ ಇಬ್ಬರು ಯುವತಿಯರು ಸಿಗರೇಟ್‌ ಸೇದುತ್ತಾ ರಾಷ್ಟ್ರಗೀತೆಗೆ ಅಪಮಾನ ಮಾಡಿ, ಹುಚ್ಚಾಟ ನಡೆಸಿದ್ದಾರೆ. ಅಲ್ಲದೇ ಈ ಸನ್ನಿವೇಶವನ್ನ ವೀಡಿಯೋ ಮಾಡಿ ಜಾಲತಾಣದಲ್ಲೂ (Social Media) ಹಂಚಿಕೊಂಡಿದ್ದಾರೆ. ಈ ವೀಡಿಯೋ ಆಧರಿಸಿ ವಕೀಲ ಅತ್ರಯೀ ಹಾಲ್ದರ್ ಅವರು ಲಾಲ್‌ಬಜಾರ್ ಸೈಬರ್ ಘಟಕ ಹಾಗೂ ಬಾರಕ್‌ಪುರದಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಠಾಣೆಗೆ ನುಗ್ಗಿದ 60 ಮಂದಿ ಗುಂಪು – ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಡಕಾಯಿತನ ರಿಲೀಸ್

ಈ ಪೋಸ್ಟ್ ಮಾಡಲಾಗಿದ್ದ ಫೇಸ್‌ಬುಕ್ ಖಾತೆಯನ್ನು ಡಿಲೀಟ್ ಮಾಡಿರುವುದರಿಂದ ಈಗ ವಿಡಿಯೋ ಅದರಲ್ಲಿ ಲಭ್ಯವಿಲ್ಲ. ಆದರೆ ಕೆಲವರು ವೀಡಿಯೋವನ್ನ ಟ್ವಿಟ್ಟರ್‌ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಸಿಗರೇಟ್ ಸೇದುತ್ತಾ ಕುಳಿತಿರುವ ಯುವತಿಯರು ಉದ್ದೇಶಪೂರ್ವಕವಾಗಿ ರಾಷ್ಟ್ರಗೀತೆಯ ಸಾಲುಗಳನ್ನ ವ್ಯಂಗ್ಯವಾಗಿ ಹಾಡಿ, ಅಪಮಾನ ಮಾಡಿದ್ದಾರೆ ಎನ್ನಲಾಗಿದೆ.

ಕೈಯಲ್ಲಿ ಸಿಗರೇಟ್ ಹಿಡಿದು ವಿಚಿತ್ರವಾಗಿ ನಗುವ ಯುವತಿಯೊಬ್ಬಳು ರಾಷ್ಟ್ರಗೀತೆಯನ್ನು ಮನಬಂದಂತೆ ಹಾಡಿದ್ದಾಳೆ. ಪಕ್ಕದಲ್ಲಿ ಕುಳಿತಿದ್ದ ಯುವತಿ ಸಹ ಆಕೆಯಂತೆಯೇ ವರ್ತಿಸಿದ್ದು, ಆ ಸಿಗರೇಟ್ ಅನ್ನು ಕಿತ್ತುಕೊಂಡು, ಇದು ಧ್ವಜ, ಧ್ವಜ ಎಂದು ಇಂಗ್ಲಿಷ್‌ನಲ್ಲಿ ಹೇಳಿದ್ದಾಳೆ. ಕೊನೆಯಲ್ಲಿ ರಾಷ್ಟ್ರಗೀತೆ ಹಾಡಿದ ಮೊದಲ ಯುವತಿ ಕ್ಷಮೆ ಕೇಳುತ್ತೇನೆ ಹಾಸ್ಯವಾಗಿ ಹೇಳಿದ್ದಾಳೆ. ಇದನ್ನೂ ಓದಿ: 2 ತಿಂಗಳಿಂದ ನನ್ನ ಮಕ್ಕಳು ಕಾಣ್ತಿಲ್ಲ: ಸಿಎಂ, ಗೃಹ ಸಚಿವರಿಗೆ ಪತ್ರ ಬರೆದ ಅವಳಿ ಸಹೋದರಿಯರ ತಂದೆ

ಯುವತಿಯರ ಹುಚ್ಚಾಟಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವತಿಯರು ವೀಡಿಯೋ ಹಂಚಿಕೊಂಡಿರುವ ಖಾತೆ ಬಗ್ಗೆ ಹೆಚ್ಚುವರಿ ಮಾಹಿತಿ ನೀಡುವಂತೆ ಲಾಲ್‌ಬಜಾರ್ ಪೊಲೀಸರು ಫೇಸ್‌ಬುಕ್‌ಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಫೇಸ್‌ಬುಕ್ ಖಾತೆ ಡಿಲೀಟ್ ಮಾಡಿದ ನಂತರ ಇಬ್ಬರು ಹೆಣ್ಣುಮಕ್ಕಳು ಮತ್ತೊಂದು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಲೈವ್ ಬಂದಿದ್ದು, ತಮ್ಮ ಗೆಳೆಯರ ಬಳಗದಲ್ಲಿ ಪಂದ್ಯಕಟ್ಟಿ ತಮಾಷೆಗಾಗಿ ಈ ರೀತಿ ವಿಡಿಯೋ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

ಈ ಸಂಬಂಧ ಕೇಸ್‌ ದಾಖಲಿಸಿಕೊಂಡಿರುವ ಪಶ್ಚಿಮ ಬಂಗಾಳ ಪೊಲೀಸರು (Westbengal Police) ತನಿಖೆ ನಡೆಸುತ್ತಿದ್ದಾರೆ.