ಬೆಳಗಾವಿಯಲ್ಲಿ ಭಾರೀ ಮಳೆ – ಶಾಲಾ, ಕಾಲೇಜುಗಳಿಗೆ ರಜೆ

ಬೆಳಗಾವಿ: ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಎರಡು ದಿನ ನಾಲ್ಕು ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಬೆಳಗಾವಿ, ಖಾನಾಪುರ, ಬೈಲಹೊಂಗಲ, ಕಿತ್ತೂರು ತಾಲೂಕಿನ ಶಾಲಾ- ಕಾಲೇಜುಗಳಿಗೆ ಜಿಲ್ಲಾಧಿಕಾರಿ ಎಸ್.ಬಿ ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ. ಇನ್ನೂ ಮಳೆ ಮುಂದುವರೆಯುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಮುಂಜಾಗ್ರತವಾಗಿ 31ಜುಲೈ ಮತ್ತು ಅಗಸ್ಟ್ 1ರಂದು ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಮಂಗಳವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮಳೆಗೆ ಹಲವು ಗ್ರಾಮಗಳು ಸಂಪರ್ಕ ಕಡಿತಗೊಂಡಿದೆ. ಬೆಳಗಾವಿ ತಾಲೂಕಿನ ಕೆಲವೆಡೆ ಮನೆಗಳಿಗೆ ನೀರು ನುಗ್ಗಿ ಮಳೆ ಅವಾಂತರ ಸೃಷ್ಟಿಸಿದೆ. ಖಾನಾಪೂರ ತಾಲೂಕಿನಾದ್ಯಂತ ಭಾರೀ ಮಳೆಯಿಂದ ಅಪಾಯದ ಮಟ್ಟ ಮೀರಿ ಹಳ್ಳಕೊಳ್ಳಗಳು ಹರೀತಿವೆ.

ಇತ್ತ ಮಹಾರಾಷ್ಟ್ರದಲ್ಲಿ ನಿರಂತರ ವರುಣನ ಆರ್ಭಟದಿಂದ ವಿಜಯಪುರದ ಆಲಮಟ್ಟಿ ಲಾಲಾಬಹದ್ದೂರ್‌ ಶಾಸ್ತ್ರಿ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಅಲ್ಲದೆ ರಾಯಚೂರಿನ ನಾರಾಯಣಪುರ ಜಲಾಶಯ ಕೂಡ ಭರ್ತಿಯಾಗಿದೆ. 20 ಗೇಟುಗಳಿಂದ ಜಲಾಶಯದಿಂದ 1.63 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯದ ಕೆಳಭಾಗದ ಯಾದಗಿರಿ ಹಾಗು ರಾಯಚೂರು ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಕೆಲವು ಗ್ರಾಮಗಳಿಂದ ಸಂಪರ್ಕ ಕಡಿತ ಸಾಧ್ಯತೆ ಇದೆ.

ಅಲ್ಲದೆ ಯಾದಗಿರಿಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ, ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 20 ಗೇಟ್‍ಗಳ ಮೂಲಕ ನೀರು ಬಿಡಲಾಗಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮುಂದುವರಿದ ಭಾರಿ ಮಳೆಯಿಂದಾಗಿ ಚಿಕ್ಕೋಡಿ ತಾಲೂಕಿನ ವೇದಗಂಗಾ, ಧೂಧಗಂಗಾ, ಕೃಷ್ಣಾ ನದಿ ನೀರಿನಲ್ಲಿ ಭಾರೀ ಏರಿಕೆಯಾಗಿದೆ. 6 ಕೆಳ ಹಂತದ ಸೇತುವೆಗಳ ಜಲಾವೃತ, ಅಪಾಯದ ಮಟ್ಟ ಮೀರಿ ನದಿ ನೀರು ಹರಿಯುತ್ತಿದ್ದರೂ ಸೇತುವೆಗಳ ಮೇಲೆ ಜನ ಸಂಚರಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *