ಬಿರುಕು ಮನಸುಗಳ ಮಧ್ಯೆ ಮೈಸೂರಿನಲ್ಲಿ ಬಿಜೆಪಿ ಕಾರ್ಯಕಾರಿಣಿ: ಮೊದಲ ದಿನದ ಸಂಪೂರ್ಣ ವರದಿ ಇಲ್ಲಿದೆ

ಮೈಸೂರು: ಬಣ ರಾಜಕೀಯ, ಭಿನ್ನಮತ, ಕೆಸರೆರಚಾಟದ ಕಾರ್ಮೋಡದ ಬೆನ್ನಲ್ಲೇ ಮೈಸೂರಿನಲ್ಲಿ ಆರಂಭವಾದ ಎರಡು ದಿನಗಳ ಬಿಜೆಪಿ ಕಾರ್ಯಕಾರಿಣಿಯ ಮೊದಲ ದಿನ ಒಂದು ರೀತಿ ಒಬ್ಬರ ಮುಖ ಇನ್ನೊಬ್ಬರು ನೋಡಿಕೊಳ್ಳದಂತಹ ಚಿತ್ರಣ ಇತ್ತು.

ವೇದಿಕೆಯಲ್ಲಿ ಈಶ್ವರಪ್ಪ-ಯಡಿಯೂರಪ್ಪ ಮುಖ ತಿರುಗಿಸಿಕೊಂಡೇ ಇದ್ರು. ಈಶ್ವರಪ್ಪ ಕೈ ಮುಗಿದ್ರೂ ಬಿಎಸ್‍ವೈ ರಿಯಾಕ್ಟ್ ಮಾಡ್ಲಿಲ್ಲ. ಕಾರ್ಯಕಾರಿಣಿಗೆ ಚಾಲನೆ ನೀಡಿದ ಬಳಿಕ ಮುರಳೀಧರ್ ರಾವ್‍ಗೆ ಸನ್ಮಾನ ಮಾಡಿದಾಗ ಈಶ್ವರಪ್ಪ ಕುಳಿತೇ ಇದ್ರು.

ನಿರ್ಣಯಗೋಷ್ಠಿಯಲ್ಲಿ ಕೊನೇ ಕ್ಷಣದಲ್ಲಿ ಈಶ್ವರಪ್ಪ ಹೆಸ್ರನ್ನ ಸೇರಿಸಲಾಯ್ತು. ಇದ್ರಿಂದ, ಮೊದಲು ಯಾರ ನಿರ್ಣಯ ಗೋಷ್ಠಿ ಅಂತ ಜಗದೀಶ್ ಶೆಟ್ಟರ್ ಕನ್‍ಫ್ಯೂಸ್ ಆದ್ರು. ನಂತ್ರ, ಈಶ್ವರಪ್ಪ ಮೊದಲು ಬರಲ್ಲ ಅಂದಿದ್ರು. ಆಮೇಲೆ ಬಂದ್ರು ಅದಕ್ಕಾಗಿ ಸೇರಿಸಲಾಯ್ತು ಅಂತ ವೇದಿಕೆ ಮೇಲೆಯೇ ಶೆಟ್ಟರ್‍ಗೆ ಬಿಎಸ್‍ವೈ ಸ್ಪಷ್ಟನೆ ನೀಡಿದ್ರು.

ಯಡಿಯೂರಪ್ಪ ಭಾಷಣ ಆರಂಭಿಸಿದಾಗ ಎಲ್ಲರ ಹೆಸರು ಹೇಳಿ ಈಶ್ವರಪ್ಪ ಹೆಸ್ರು ಬಿಟ್ರು. ಬಳಿಕ ಎರಡು ಮನೆಗಳ ನಾಯಕ್ರೇ ಅಂದಾಗ ಎಲ್ಲರೂ ಬಿಟ್ಟ ಕಣ್ಣು ಬಿಟ್ಟಂತೆ ನೋಡಿದ್ರು. ಈಶ್ವರಪ್ಪ ಹೆಸರು ಹೇಳದೆ ನಾನೂ ಅನಂತ್ ಕುಮಾರ್ ಒಟ್ಟಿಗೆ ಓಡಾಡಿ ಪಕ್ಷ ಕಟ್ಟಿದ್ವಿ. ಅಧಿಕಾರದ ಕುರ್ಚಿಗೆ ನಾನು ಅಂಟಿಕೊಂಡವನಲ್ಲ. ಹಾಗೇನಾದ್ರೂ ಆಗಿದ್ರೆ ಕುಮಾರಸ್ವಾಮಿ ಜೊತೆ ಹೋಗ್ತಿದೆ. ಬೈ ಎಲೆಕ್ಷನ್‍ನಲ್ಲಿ ಶೇಕಡಾವಾರು ಮತಗಳಿಗೆ ಹೆಚ್ಚಾಗಿದೆ. ಯಾರೂ ಧೃತಿಗೆಡಬೇಕಿಲ್ಲ ಅಂದಾಗಲೂ ಚಪ್ಪಾಳೆ ಸಿಗಲಿಲ್ಲ. ಕಾರ್ಯಕರ್ತರ ವರಸೆ ನೋಡಿ ಪೆಚ್ಚಾದ ಯಡಿಯೂರಪ್ಪ, ಬೆಳಗ್ಗೆ ಇಡ್ಲಿ ವಡೆ ಉಪ್ಪಿಟ್ಟು ತಿಂದು ಸುಸ್ತಾಗಿದ್ದೀರಾ ಅಂತ ತಿವಿದಾಗ ಚಪ್ಪಾಳೆ ಸದ್ದು ಕೇಳಿಸ್ತು. ಅಲ್ಲದೆ, ಕಾರ್ಯಕಾರಿಣಿಯಲ್ಲಿ ಭಿನ್ನಮತ ಬಗ್ಗೆ ಬಹಿರಂಗ ಚರ್ಚೆಗೆ ಅವಕಾಶ ಇಲ್ಲ. ಏನೇ ಇದ್ರೂ ವೈಯಕ್ತಿಕವಾಗಿ ಬಂದು ನನ್ನ ಜೊತೆ ಚರ್ಚಿಸಿ ಈಶ್ವರಪ್ಪ ಸೇರಿದಂತೆ ನಾವೆಲ್ಲಾ ಒಂದಾಗಿದ್ದೇವೆ ಅಂತ ಮೊದಲೇ ಹೇಳಿದ್ರು.

ಮುರಳಿಧರ್ ರಾವ್, ಅನಂತಕುಮಾರ್ ಅವರ ಭಾಷಣ ವೇಳೆ ಕೆಲವ್ರು ಆಕಳಿಸಿ, ನಿದ್ದೆ ಮಾಡ್ತಿದ್ರೆ ಮತ್ತೆ ಕೆಲವ್ರು ಮೊಬೈಲ್‍ನಲ್ಲಿ ಬ್ಯುಸಿಯಾಗಿದ್ರು.

ಕಾರ್ಯಕಾರಿಣಿಯಲ್ಲಿ ಮಾತನಾಡಿದ ಉಸ್ತುವಾರಿ ಮುರಳೀಧರ್ ರಾವ್, ಭಿನ್ನಮತದ ಬಗ್ಗೆ ಮಾತನಾಡದಂತೆ ಎಚ್ಚರಿಸಿದ್ರು. ನಂತ್ರ ಸಿದ್ದರಾಮಯ್ಯ ಸರ್ಕಾರಕ್ಕೆ ಕೌಂಟ್ ಡೌನ್ ಶುರುವಾಗಿದೆ. ಕಾಂಗ್ರೆಸ್ 150 ಸೀಟ್ ಗೆಲ್ಲಬೇಕಿದೆ ಅಂದ್ರು. ಸಭೆಯಲ್ಲಿ ಗಲಿಬಿಲಿ ಇತ್ತು. ತಕ್ಷಣ ಶೋಭಾ ಕರಂದ್ಲಾಜೆ ಎಚ್ಚರಿಸಿದಾಗ ಸರಿಮಾಡಿಕೊಂಡ್ರು. ಇನ್ನು, ಅನಂತ್‍ಕುಮಾರ್ ಮಾತನಾಡಿ ಚಾಮುಂಡೇಶ್ವರಿ ಆಶೀರ್ವಾದದೊಂದಿಗೆ 150 ಸೀಟು ಗೆಲ್ಲಬೇಕು. ಯಡಿಯೂರಪ್ಪ ಮತ್ತೆ ಸಿಎಂ ಆಗಬೇಕು ಅಂದ್ರು.

ಶಾಣಪ್ಪ ಮಾತು: ರಾಜ್ಯ ಸರ್ಕಾರದ ವೈಫಲ್ಯ, ಭ್ರಷ್ಟಾಚಾರ ಕುರಿತು ಜಗದೀಶ್ ಶೆಟ್ಟರ್ ಮಂಡಿಸಿದ ನಿರ್ಣಯವನ್ನ ಪರಿಷತ್ ಉಪನಾಯಕ ಕೆ.ಬಿ.ಶಾಣಪ್ಪ ಅನುಮೋದಿಸಿದ್ರು. ಈ ವೇಳೆ, ಬಿಎಸ್‍ವೈ ಮತ್ತು ಈಶ್ವರಪ್ಪ ನಡಾವಳಿಯನ್ನ ತೀವ್ರವಾಗಿ ಖಂಡಿಸಿದ್ರು. ಪಕ್ಷದ ಪರಿಸ್ಥಿತಿ, ಉದ್ದೇಶವನ್ನ ಈಶ್ವರಪ್ಪ ಅರ್ಥಮಾಡಿಕೊಳ್ಳಬೇಕು. ಒಗ್ಗಟ್ಟಾಗಿದ್ದು, ಎಲ್ಲರ ವಿಶ್ವಾಸವಿದ್ದರೆ ಮಾತ್ರ ಮಿಷನ್ 150 ಗುರಿ ಮುಟ್ಟುವುದು ಸಾಧ್ಯ ಅಂದ್ರು. ಮರಳಿಧರ್‍ರಾವ್ ಮತ್ತು ಪುರಂದೇಶ್ವರಿಗೆಗೆ ಅರ್ಥವಾಗಲಿ ಅಂತ ಇಂಗ್ಲಿಷ್‍ನಲ್ಲಿ ಜಾಡಿಸಿದ್ರು. ಸಭೆ ಮೌನವಾಗಿತ್ತು. ಈ ಸಂದರ್ಭದಲ್ಲಿ ಮುರಳೀಧರ್ ರಾವ್, ಬಿಎಸ್‍ವೈ, ಈಶ್ವರಪ್ಪ ಸೇರಿದಂತೆ ಎಲ್ಲರೂ ಮೌನವಾಗಿದ್ರು. ಇನ್ನು, ಶಾಣಪ್ಪ ಅವರ ಬಗ್ಗೆ ಮಾತನಾಡುತ್ತ ದಲಿತ ನಾಯಕ, ಅಸ್ಪೃಶ್ಯತೆ ವಿರುದ್ಧ ಹೋರಾಡಿದವರು ಅಂತ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಪರಿಚಯಿಸ್ತಿದ್ದಾಗ ಶಾಣಪ್ಪ ಕೆಂಡಾಮಂಡಲರಾದ್ರು. ಇನ್ನೂ ಯಾಕೆ ದಲಿತ, ದಲಿತ ಅಂತಿರಾ..? ನಮ್ಮನ್ಯಾಕೆ ಬಿಜೆಪಿ ಅಂತ ಹೇಳಲ್ಲ..? ಅಂಥ ಶೋಭಾ ಕರಂದ್ಲಾಜೆ ಅವರನ್ನು ಪ್ರಶ್ನಿಸಿದ್ರು.

ಭಿನ್ನಾಭಿಪ್ರಾಯದ ಹೊಗೆ: ಮೈಸೂರು ನಗರದ ಬೀದಿ ಬೀದಿಗಳಲ್ಲಿ ರಾರಾಜಿಸುತ್ತಿರುವ ಬಿಜೆಪಿ ಬಾವುಟ ಹಾಗೂ ಫ್ಲೆಕ್ಸ್‍ಗಳಲ್ಲಿ ಭಿನ್ನಾಭಿಪ್ರಾಯದ ಹೊಗೆ ಕಾಣ್ತಿತ್ತು. `ಮತದಾರರ ಮನಸ್ಸು ಅರಿಯಿರಿ.. ವೈಮನಸ್ಸು ಮರೆತು ಜೊತೆಯಲ್ಲಿ ಸಾಗಿರಿ. ಗೆಲುವಿಗೆ “ಸಂತೋಷವೇ” ಸೂತ್ರ ಅನ್ನೋ ಬರಹಗಳು ಗಮನ ಸೆಳೆದ್ವು. ಇನ್ನು, ಬ್ರಿಗೇಡ್ ವೀರ ಈಶ್ವರಪ್ಪ ಏಕಾಂಗಿಯಾಗಿದ್ರು.

ವೇದಿಕೆ ಮೇಲೆ ಹಾಗೂ ಊಟದ ಹಾಲ್‍ನಲ್ಲಿ ಒಂಟಿಯಾಗಿ ಕೂತಿದ್ರು. ಈಶ್ವರಪ್ಪ ಜೊತೆ ಮಾತನಾಡಲು ಹಿರಿಯ ನಾಯಕರೂ ಹಿಂಜರಿದ್ರು. ಇನ್ನು, ಊಟದ ಬ್ರೇಕ್‍ನಲ್ಲಿ ಬಿಜೆಪಿಯ ನಾಯಕರೆಲ್ಲಾ ಒಟ್ಟಾಗಿ ಕಾಣಿಸಿಕೊಂಡಾಗ ಕಾರ್ಯಕರ್ತರು ಸೆಲ್ಫಿಗಾಗಿ ನುಗ್ಗಿದ್ರು. ಇನ್ನು, ಮುರಳೀಧರ್‍ರಾವ್ ಕಟ್ಟಪ್ಪಣೆ ಮೇರೆಗೆ ಸುದ್ದಿಗೋಷ್ಠಿ ಸ್ಥಳವನ್ನು ಸ್ಥಳಾಂತರಿಸಿ ಮಾಧ್ಯಮಗಳಿಂದ ಅಂತರ ಕಾಯ್ದುಕೊಳ್ಳಲಾಗಿತ್ತು.

ಈ ಮಧ್ಯೆ, ಮೊದಲ ದಿನದ ಕಾರ್ಯಕಲಾಪದ ಬಗ್ಗೆ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ರಾಜ್ಯ ಸರ್ಕಾರದ ಭ್ರಷ್ಟಚಾರದ ವಿರುದ್ಧ ಹೋರಾಡಲು ನಿರ್ಣಯ ತೆಗೆದುಕೊಳ್ಳಲಾಗಿದೆ ಅಂದ್ರು. ಆದ್ರೆ, ಪಕ್ಷದ ಬಿಕ್ಕಟ್ಟಿನ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸದೆ ತರಾತುರಿಯಲ್ಲಿ ಸುದ್ದಿಗೋಷ್ಠಿ ಮುಗಿಸಿದ್ರು.

 

B

 

 

 

Comments

Leave a Reply

Your email address will not be published. Required fields are marked *