ತಾಯಿಯಿಂದ ಬೇರ್ಪಟ್ಟಿದ್ದ 2 ಚಿರತೆ ಮರಿಗಳ ರಕ್ಷಣೆ -ಅರಣ್ಯ ಇಲಾಖೆ ಸಿಬ್ಬಂದಿ ಆರೈಕೆ

ಹಾಸನ: ಹೊಳೇನರಸೀಪುರದ ಕಾಮೇನಹಳ್ಳಿ ಬಳಿ ತಾಯಿಯಿಂದ ಬೇರ್ಪಟ್ಟಿದ್ದ ಎರಡು ಚಿರತೆ ಮರಿಗಳು ತಾಯಿಯ ಆರೈಕೆ ಇಲ್ಲದೆ ಬೆಳೆಯುವಂತಾಗಿದೆ. ಅರಣ್ಯ ಇಲಾಖೆಯ ಆರೈಕೆಯಲ್ಲಿ ಬೆಳೆಯುತ್ತಿರುವ ಚಿರತೆ ಮರಿಗಳಿಗೆ ಅರಣ್ಯ ಪಾಲಕರೇ ಈಗ ಪೋಷಕರಾಗಿದ್ದಾರೆ.

ಹೌದು. ನಗರದ ಹೊರವಲಯದಲ್ಲಿರುವ ಗೆಂಡೆಕಟ್ಟೆ ಫಾರೆಸ್ಟ್ ಅರಣ್ಯಧಾಮದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ ಎರಡು ಚಿರತೆ ಮರಿಗಳನ್ನು ಸಾಕಲಾಗುತ್ತಿದೆ. ತಾಯಿ ಇಲ್ಲದ ತಬ್ಬಲಿಯಾಗಿರುವ ಚಿರತೆ ಮರಿಗಳಿಗೆ ಮೇಕೆ ಹಾಲು, ಕೋಳಿ ಮಾಂಸ ತಿನ್ನುತ್ತ ಬೆಳೆಯುತ್ತಿವೆ. ತಮ್ಮದಲ್ಲದ ತಪ್ಪಿಗೆ ಈಗ ಈ ಚಿರತೆ ಮರಿಗಳು ಪರೆದಾಡುವಂತಾಗಿದೆ. ತಾಯಿ ಚಿರತೆಯಿಂದ ಬೇರೆಯಾಗಿರುವ ಎರಡು ಮರಿಗಳೀಗ ಅರಣ್ಯ ಸಿಬ್ಬಂದಿ ಪೋಷಣೆ ಮಾಡುತಿದ್ದಾರೆ. ಪ್ರತಿದಿನ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಮೂರು ಹೊತ್ತು ಆಹಾರ ನೀಡಲಾಗುತ್ತಿದೆ. ಕೋಳಿ ಮರಿಯ ಮಾಂಸವನ್ನ ಸಣ್ಣದಾಗಿ ಕತ್ತರಿಸಿ ನೀಡುವುದರ ಜೊತೆಗೆ ಮೇಕೆ ಹಾಲನ್ನ ಕುಡಿಸಲಾಗುತ್ತಿದೆ.

ಹೊಳೇನರಸೀಪುರದ ಕಾಮೇನೆಹಳ್ಳಿಯ ಕಬ್ಬಿನ ಗದ್ದೆಯಲ್ಲಿ ಈ ಚಿರತೆ ಮರಿಗಳು ಪತ್ತೆಯಾಗಿದ್ದವು. ಕಾಡು ಬೆಕ್ಕಿನ ಮರಿ ಎಂದುಕೊಂಡಿದ್ದ ರೈತರು ನಂತರ ಚಿರತೆ ಮರಿ ಎಂದು ಖಾತ್ರಿಯಾದ ನಂತರ ಅವುಗಳನ್ನು ರಕ್ಷಿಸಿ ಅರಣ್ಯ ಸಿಬ್ಬಂದಿಗೆ ನೀಡಿದ್ದರು. ಮರಿಗಳಿಗೆ ಮೂರು ತಿಂಗಳು ತುಂಬಿದ್ದು, ಈಗಾಗಲೆ ಚಿರತೆ ಧಾಮ ಅಥವಾ ಚಿರತೆ ಪುನರ್‍ವಸತಿ ಕೇಂದ್ರಕ್ಕೆ ಅವುಗಳನ್ನು ವರ್ಗಾಯಿಸಬೇಕಿತ್ತು. ಆದರೆ ಮೈಸೂರು, ಚಿತ್ರದುರ್ಗ ಹಾಗೂ ಶಿವಮೊಗ್ಗ ಚಿರತೆ ಧಾಮಗಳಲ್ಲಿ ಸ್ಥಳಾವಕಾಶ ಇಲ್ಲದೆ ಹಾಸನದ ಗೆಂಟೆಕಟ್ಟೆಯಲ್ಲಿಯೇ ಚಿರತೆ ಮರಿಗಳು ಬೆಳೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಮಧ್ಯೆ ಇನ್ನೊಂದು ತಿಂಗಳೊಳಗೆ ಚಿರತೆ ಧಾಮಕ್ಕೆ ಮರಿಗಳನ್ನ ವರ್ಗಾಯಿಸಲಾಗುವುದು ಎಂದು ಅರಣ್ಯ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಕೇವಲ ಮೂರು ತಿಂಗಳ ವಯಸ್ಸಿನ ಈ ಮರಿಗಳಿಗೆ ಆರೈಕೆ ಮಾಡುವುದೇ ಒಂದು ಕಷ್ಟದ ಕೆಲಸವಾಗಿತ್ತು. ಆದರೆ ವನ್ಯ ಜೀವಿ ವೈದ್ಯರೂ ಕೂಡ ಮರಿಗಳ ಆರೈಕೆಯಲ್ಲಿ ಕೈಜೋಡಿಸಿದ್ದು, ಮರಿಗಳ ಆರೋಗ್ಯದ ಬಗ್ಗೆ ನಿಗಾವಹಿಸಿ ಪಾಲನೆ ಮಾಡಲು ಸಹಾಯಕಾರಿಯಾಗಿದೆ. ಸಾಮಾನ್ಯವಾಗಿ ಕಾಡು ಪ್ರಾಣಿಗಳನ್ನ ಆರೈಕೆ ಮಾಡುವಲ್ಲಿ ಹಲವು ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಇದು ಕೊಂಚ ಕಷ್ಟದ ಕಾರ್ಯವಾಗಿದ್ದು, ಕೆಲವೊಮ್ಮೆ ಮನುಷ್ಯರ ಮೇಲೆ ದಾಳಿ ಮಾಡಬಹುದು. ಹೀಗಾಗಿ ಶೀಘ್ರದಲ್ಲೇ ಅವುಗಳನ್ನು ಚಿರತೆ ಧಾಮಕ್ಕೆ ಬಿಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮರಿಗಳು ಮನುಷ್ಯನ ಆಸರೆಯಲ್ಲಿ ಬೆಳೆಯುತ್ತಿರುವುದರಿಂದ ಕಾಡಿಗೆ ಬಿಟ್ಟರೆ ಅವುಗಳ ಜೀವಕ್ಕೆ ಅಪಾಯ ಇದೆ. ಆದಷ್ಟು ಬೇಗ ಚಿತ್ರದುರ್ಗದ ನೂತನ ಚಿರತೆ ಧಾಮಕ್ಕೆ ಅವುಗಳನ್ನು ಸಾಗಿಸಲಿ, ಅವುಗಳಿಗೂ ಶಾಶ್ವತ ಸ್ಥಾನವನ್ನು ಅರಣ್ಯ ಇಲಾಖೆ ನೀಡಬೇಕಾಗಿದೆ.

Comments

Leave a Reply

Your email address will not be published. Required fields are marked *