ಛತ್ತೀಸ್‍ಗಢದಲ್ಲಿ ಮತ್ತೆ ನಕ್ಸಲರ ಅಟ್ಟಹಾಸ – ಇಬ್ಬರು ಯೋಧರು ಹುತಾತ್ಮ

-ಓರ್ವ ಯೋಧನ ಸ್ಥಿತಿ ಗಂಭೀರ

ರಾಯಪುರ: ಛತ್ತೀಸ್‍ಗಢದಲ್ಲಿ ಮತ್ತೆ ನಕ್ಸಲರು ತಮ್ಮ ಅಟ್ಟಹಾಸ ಮೆರೆದಿದ್ದು, ಇಂದು ಬಿಎಸ್‍ಎಫ್ ಯೋಧರು ಹಾಗೂ ನಕ್ಸಲರ ನಡುವೆ ನಡೆದ ಎನ್‍ಕೌಂಟರ್ ನಲ್ಲಿ ಇಬ್ಬರು ಬಿಎಸ್‍ಎಫ್ ಯೋಧರು ಹುತಾತ್ಮರಾಗಿದ್ದಾರೆ.

ಛತ್ತೀಸ್‍ಗಢದ ಕಂಕರ್ ಜಿಲ್ಲೆಯ ಮಹ್ಲಾ ಕ್ಯಾಂಪ್ ಬಳಿ ನಡೆಯುತ್ತಿರುವ ನಕ್ಸಲರ ವಿರುದ್ಧ ಕಾರ್ಯಚರಣೆ ವೇಳೆ ದಾಳಿ ನಡೆದಿದ್ದು, ಈ ವೇಳೆ ಮತ್ತೊಬ್ಬ ಯೋಧ ಗಾಯಗೊಂಡಿದ್ದಾರೆ. ಸದ್ಯ ಗಾಯಗೊಂಡ ಯೋಧನನ್ನು ಹೆಲಿಕಾಪ್ಟರ್ ಮೂಲಕ ರಾಯಪುರ ಆಸ್ಪತ್ರೆಗೆ ರವಾನಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

ಛತ್ತೀಸ್‍ಗಢದ ರಾಜಧಾನಿ ರಾಯಪುದಿಂದ 250 ಕಿಮೀ ದೂರದಲ್ಲಿರುವ ಬಾರ್ಕೋಟ್ ಗ್ರಾಮದ ಅರಣ್ಯದಲ್ಲಿ ಬಿಎಸ್‍ಎಫ್ 114 ನೇ ಬೆಟಾಲಿಯನ್ ಯೋಧರು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಅಡಗಿ ಕುಳಿತಿದ್ದ ನಕ್ಸಲರು ಯೋಧರ ಮೇಲೆ ದಾಳಿ ನಡೆಸಿದ್ದಾರೆ. ಸದ್ಯ ಎನ್‍ಕೌಂಟರ್ ನಡೆಯುತ್ತಿರುವ ಪ್ರದೇಶಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗಿ ವರದಿಯಾಗಿದೆ. ಪ್ರಸ್ತುತ ಎನ್‍ಕೌಂಟರ್ ನಡೆದ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಹುತಾತ್ಮ ಯೋಧರಿಗೆ ಛತ್ತೀಸ್‍ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಸಂತಾಪ ಸೂಚಿಸಿದ್ದಾರೆ. ಜುಲೈ 9 ರಂದು ಕಂಕರ್ ಬಳಿ ನಡೆದ ಎನ್‍ಕೌಂಟರ್ ನಲ್ಲಿ 121ನೇ ಬೆಟಾಲಿಯನ್ 2 ಯೋಧರು ಹುತಾತ್ಮರಾಗಿದ್ದರು.

Comments

Leave a Reply

Your email address will not be published. Required fields are marked *