ಮನೆ ನಿರ್ಮಾಣಕ್ಕೆ ಪಾಯ ತೋಡಿ ಹೊರ ಹಾಕಿದ್ದ ಮಣ್ಣಿನಲ್ಲಿ ಸ್ಫೋಟಕ ಸಿಡಿದು ಬಾಲಕರಿಬ್ಬರಿಗೆ ಗಾಯ

ರಾಯಚೂರು: ಸ್ಫೋಟಕ ವಸ್ತು ಸಿಡಿದು ಇಬ್ಬರು ಬಾಲಕರು ಗಾಯಗೊಂಡ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಬಸವರಾಜೇಶ್ವರಿ ಕ್ಯಾಂಪ್‍ನಲ್ಲಿ ನಡೆದಿದೆ.

ಗೌರಂಗು ಮಂಡಲ್ ಹಾಗೂ ಬಿಸ್ವಾಜಿತ್ ಮಂಡಲ್ ಗಾಯಗೊಂಡಿರುವ ಬಾಲಕರು. ಗ್ರಾಮದ ರಮೇಶ್ ಎಂಬವರು ಮನೆ ನಿರ್ಮಾಣಕ್ಕೆ ಪಾಯ ತೋಡಿ ಹೊರಹಾಕಿದ್ದ ಮಣ್ಣಿನಲ್ಲಿ ಬಾಲಕರಿಬ್ಬರು ಆಟವಾಡುತ್ತಿದ್ದ ವೇಳೆ ಸಿಕ್ಕ ಬ್ಯಾಗ್ ನಲ್ಲಿ ಸ್ಫೋಟಕ ಪತ್ತೆಯಾಗಿದೆ. ಅದನ್ನ ಹೊರತೆಗೆದು ಬಾಲಕರು ಆಟವಾಡಿದ್ದಾರೆ. ಈ ಸಂದರ್ಭದಲ್ಲಿ ಸ್ಫೋಟಗೊಂಡಿದ್ದು ಸಣ್ಣಪುಟ್ಟ ಗಾಯಗಳಾಗಿವೆ.

ಘಟನೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಸಿಂಗ್ ರಾಥೋರ್ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಹಳೆಯ ಮನೆಯನ್ನ ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು, ಈ ಹಿಂದೆ ಇದ್ದ ಮನೆಯಲ್ಲೇ ನಾಡಬಾಂಬ್ ಅಡಗಿಸಿಟ್ಟಿದ್ದಿರಬಹುದು ಅಂತಾ ಶಂಕಿಸಲಾಗಿದೆ.

ಈ ಬಗ್ಗೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸ್ಫೋಟಕ ವಸ್ತು ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ. ಗಾಯಗೊಂಡ ಮಕ್ಕಳು ಚೇತರಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *