ಬ್ಯಾಂಕ್‍ನಿಂದ ತಂದ ಹಣ ಎಗರಿಸಿ ಸಿಕ್ಕಿ ಬಿದ್ರು- ಮರಕ್ಕೆ ಕಟ್ಟಿ ಆರೋಪಿಗೆ ಗೂಸಾ!

ಬೆಂಗಳೂರು: ಬ್ಯಾಂಕ್‍ನಿಂದ ಡ್ರಾ ಮಾಡಿ ತಂದಿದ್ದ ಹಣವನ್ನು ಸ್ಕೂಟರಿನಿಂದ ಕದಿಯಲು ಯತ್ನಿಸಿದ ದುಷ್ಕರ್ಮಿಗಳು ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದು ಗೂಸಾ ತಿಂದಿದ್ದರುವ ಘಟನೆ ನಗರದ ಪೀಣ್ಯದ ಎಪಿ ನಗರದಲ್ಲಿ ನಡೆದಿದೆ.

ಇಂದು ಮಧ್ಯಾಹ್ನ ಪೀಣ್ಯದ ಎಪಿ ನಗರದ ನಿವಾಸಿ ಲಕ್ಷ್ಮಣ್ 3 ಲಕ್ಷ ರೂ. ಹಣವನ್ನು ಬ್ಯಾಂಕಿನಿಂದ ಡ್ರಾ ಮಾಡಿಕೊಂಡು ಹೊರಬಂದಿದ್ದರು. ಹಣವನ್ನು ಸ್ಕೂಟರ್ ಡಿಕ್ಕಿಯಲ್ಲಿಟ್ಟು ಮನೆಯ ಕಡೆ ಹೊರಟ್ಟಿದ್ದರು. ಆ ವೇಳೆ ಬೌನ್ ಬೈಕಿನಲ್ಲಿ ಬಂದ ಕಳ್ಳರು ಲಕ್ಷ್ಮಣ್ ಅವರನ್ನು ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾರೆ. ಮನೆ ಬಳಿ ಬಂದು ಏನೋ ತೆಗೆದುಕೊಳ್ಳಲು ಲಕ್ಷ್ಮಣ್ ಅವರು ಒಳ ಹೋದಾಗ ಸ್ಕೂಟರ್ ಡಿಕ್ಕಿ ಮುರಿದು ಹಣ ಎಗರಿಸಿದ್ದಾರೆ.

ಆ ವೇಳೆಗೆ ಹಣ ಕಳ್ಳತನವಾಗಿರುವ ಬಗ್ಗೆ ಲಕ್ಷ್ಮಣ್ ಅವರ ಪುತ್ರ ಜೋರಾಗಿ ಕೂಗಿ ಸಾರ್ವಜನಿಕರ ಸಹಾಯ ಕೇಳಿದ್ದರು. ಕೂಡಲೇ ಸ್ಥಳದಿಂದ ಬೌನ್ಸ್ ಬೈಕ್ ನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿ ಸಾರ್ವಜನಿಕರ ಕೈಗೆ ಸಿಕ್ಕಿಬಿದಿದ್ದಾನೆ. ಆತನನ್ನು ಮರಕ್ಕೆ ಕಟ್ಟಿ ಹಾಕಿ ಸಾರ್ವಜನಿಕರು ಗೂಸಾ ಕೊಟ್ಟಿದ್ದಾರೆ. ಈ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದರು.

ಈ ಸಂದರ್ಭದಲ್ಲಿ ಸಿಕ್ಕಿಬಿದ್ದ ಯುವಕನೊಂದಿಗೆ ಇದ್ದ ಮತ್ತಿಬ್ಬರು ಸ್ಥಳದಿಂದ ಪರಾರಿಯಾಗಿದ್ದರು. ಆದರೆ ಆ ಬಳಿಕ ಯುವಕನಿಂದ ಮಾಹಿತಿ ಪಡೆದ ಪೊಲೀಸರು ಮತ್ತಿಬ್ಬರು ಯುವಕರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡಿದ್ದಾರೆ. ಸದ್ಯ ಮೂವರು ಯುವಕರು ತಾವು ಹಣವನ್ನು ಕಳ್ಳತನ ಮಾಡಿಲ್ಲ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರ ಮಾಹಿತಿಯ ಅನ್ವಯ ಸಿಕ್ಕಿಬಿದ್ದವರು 12 ರಿಂದ 14ವರ್ಷ ವಯಸ್ಸಿನವರಾಗಿದ್ದು, ಬೇರೆ ಯಾರೋ ಕೃತ್ಯ ಎಸಗಿದ್ದಾರೆ. ಬ್ಯಾಂಕ್ ಹೊರಗೆ ಬೇರೆ ವ್ಯಕ್ತಿಗಳು ನಿಂತು ಕಾಯುತ್ತಿರುವುದು ಸಿಸಿಟಿವಿಯಲ್ಲಿ ಸಿಕ್ಕಿದ್ದು, ಸಾರ್ವಜನಿಕರು ಹಿಡಿದವರು ಈ ಕೃತ್ಯ ಮಾಡಿಲ್ಲ ಎಂಬ ಅನುಮಾನವಿದೆ ಎಂದು ತಿಳಿಸಿದ್ದಾರೆ. ಸದ್ಯ ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡಿರುವ ಬಗ್ಗೆ ದೂರು ದಾಖಲಿಸಿಕೊಂಡಿದ್ದು, ಕಳ್ಳರು ಯಾರು ಎಂಬುವುದನ್ನು ಪತ್ತೆ ಮಾಡಲು ತನಿಖೆ ಮುಂದುವರಿಸಿದ್ದಾರೆ.

Comments

Leave a Reply

Your email address will not be published. Required fields are marked *