2 ಶರ್ಟ್ ಕದಿದ್ದಕ್ಕೆ 20 ವರ್ಷ ಜೈಲು – ಇತ್ತ ಮನೆ ಮಂದಿಯನ್ನೇ ಕಳೆದುಕೊಂಡ

ನ್ಯೂಯಾರ್ಕ್: ಬಟ್ಟೆಯಂಗಡಿಯೊಂದರಲ್ಲಿ ಕೇವಲ 2 ಶರ್ಟ್ ಕದ್ದ ಅಪರಾಧಕ್ಕೆ ವ್ಯಕ್ತಿಯೊಬ್ಬರು ಬರೋಬ್ಬರಿ 20 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿರುವ ಕರುಣಾಜನಕ ಘಟನೆ ಅಮೆರಿಕದಲ್ಲಿ ನಡೆದಿದೆ.

ಫ್ರಾಂಕ್ ಸಣ್ಣ ತಪ್ಪಿಗೆ ಸುದೀರ್ಘ ಕಾಲ ಜೈಲುವಾಸ ಅನುಭಿವಿಸಿ ಈಗ ಬಿಡುಗಡೆಯಾಗಿದ್ದಾರೆ. ಕೆಲ ಪ್ರಜ್ಞಾವಂತರು ಪ್ರಾಂಕ್‍ಗೆ ವಿಧಿಸಿದ್ದ ಅಮಾನವೀಯ ಶಿಕ್ಷೆಯನ್ನು ಪ್ರಶ್ನಿಸಿ ಕಾನೂನು ಹೋರಾಟ ನಡೆಸಿದ್ದರು. 23 ವರ್ಷ ಜೈಲು ಶಿಕ್ಷೆ ವಿಧಿಸಿದ್ದ ಕೋರ್ಟ್ ಕೊನೆಯ 3 ವರ್ಷಗಳ ಜೈಲುವಾಸವನ್ನು ರದ್ದುಗೊಳಿಸಿದೆ.
ಕಡು ಬಡವನಾಗಿದ್ದ ಫ್ರಾಂಕ್‍ಗೆ ಪತ್ನಿ, ಒಬ್ಬ ಮಗನಿದ್ದ. ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ಕಳ್ಳತನಗಳನ್ನು ಮಾಡಿ ಜೀವನವನ್ನು ನಡೆಸುತ್ತಿದ್ದರು. ಯಾರನ್ನೂ ಹೆದರಿಸಿ ಲೂಟಿ ಮಾಡುತ್ತಿರಲಿಲ್ಲ. ಸೂಪರ್ ಮಾರ್ಕೆಟ್, ಬಟ್ಟೆ ಶಾಪ್‍ಗಳಲ್ಲಿ ಯಾರಿಗೂ ತಿಳಿಯದಂತೆ ಒಂದೆರೆಡು ವಸ್ತುಗಳನ್ನು ಕಳವು ಮಾಡುತ್ತಿದ್ದರು. ಇದೇ ರೀತಿ ಕಳವು ಮಾಡಿ ಸಿಕ್ಕಿಬಿದ್ದಿದ್ದರು. 2000ನಲ್ಲಿ ಫ್ರಾಂಕ್‍ನನ್ನು ಬಂಧಿಸಲಾಗಿತ್ತು. 47 ವರ್ಷದ ಫ್ರಾಂಕ್‍ಗೆ ಅಲ್ಲಿನ ಕೋರ್ಟ್ 23 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿತ್ತು.

ಬಡ ಕುಟುಂಬ ಫ್ರಾಂಕ್‍ಗಾಗಿ ಉತ್ತಮ ಕಾನೂನು ಸೌಲಭ್ಯ ನೀಡಲು ಸಾಧ್ಯವಾಗಲಿಲ್ಲ. ಇದರಿಂದ ಫ್ರಾಂಕ್ ಜೈಲಿನಲ್ಲೇ ತಮ್ಮ ಜೀವನವನ್ನು ಸವೆಸುವಂತಾಯಿತು. ಫ್ರಾಂಕ್ ಪ್ರಕರಣವನ್ನು ಗಮನಿಸಿದ ಅಮೆರಿಕಾದ ಕೆಲ ಪ್ರಜ್ಞಾವಂತರು ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿದರು. ಸಣ್ಣ ಅಪರಾಧಕ್ಕಾಗಿ ಇಷ್ಟು ಕಠಿಣ ಶಿಕ್ಷೆ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು. ಅಮೆರಿಕದಲ್ಲಿ ಬಡ ಕಪ್ಪು ವರ್ಣಿಯರ ಮೇಲಾಗುತ್ತಿರುವ ಶೋಷಣೆಯಿದು ಎಂದು ಕೆಲವರು ಹೇಳಿದರು.

ಕೋರ್ಟ್ ತನ್ನ ಶಿಕ್ಷೆಯನ್ನು ಕಡಿತಗೊಳಿಸಿ ಫ್ರಾಂಕ್‍ನ ಬಿಡುಗಡೆ ಮಾಡಿದೆ. 23 ವರ್ಷಗಳ ಶಿಕ್ಷೆಯನ್ನು ಕಡಿತಗೊಳಿಸುವಷ್ಟರಲ್ಲಿ ಫ್ರಾಂಕ್ 20 ವರ್ಷಗಳ ಕಾಲ ಜೈಲಿನಲ್ಲಿ ಕಳೆದಾಗಿತ್ತು. ಕೇವಲ 3 ವರ್ಷಗಳ ಶಿಕ್ಷೆಯಿಂದ ಮಾತ್ರ ಪಾರಾಗಿದ್ದ ಫ್ರಾಂಕ್ ಜೈಲಿನಿಂದ ಬಿಡುಗಡೆ ಆಗುವಷ್ಟರಲ್ಲಿ ಪತ್ನಿ, ಮಗ, ಇಬ್ಬರು ಸೋದರರು ಮೃತಪಟ್ಟಿದ್ದರು. ಫ್ರಾಂಕ್‍ನ ಕುಟುಂಬವೇ ಸಾವಿನ ಮನೆ ಸೇರಿಯಾಗಿತ್ತು. 67 ವರ್ಷದ ಫ್ರಾಂಕ್ ಜೈಲಿನಿಂದ ಬಿಡುಗಡೆಯಾದರೂ ಒಬ್ಬಂಟಿ. ಒಟ್ಟಿನ್ಲಲಿ ಕೇವಲ 2 ಶರ್ಟ್ ಕದ್ದ ಅಪರಾಧಕ್ಕೆ ಫ್ರಾಂಕ್ ತನ್ನದೆಲ್ಲವನ್ನೂ ಕಳೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *