2 ರಿಂದ 4 ವಾರದ ಒಳಗಡೆ ಮೂರನೇ ಕೊರೊನಾ ಅಲೆ – ತಜ್ಞರ ಎಚ್ಚರಿಕೆ

ಮುಂಬೈ: ಎರಡನೇ ಅಲೆ ಕಡಿಮೆಯಾಗುತ್ತಿರುವ ಬೆನ್ನಲ್ಲೇ ಈಗ ಮೂರನೇ ಕೊರೊನಾ ಅಲೆಯ ಆತಂಕ ಎದುರಾಗಿದೆ.

ಕೊರೊನಾ ನಿಯಮಗಳನ್ನು ಪಾಲಿಸದೇ ಇದ್ದರೆ ಮುಂದಿನ ಎರಡರಿಂದ ನಾಲ್ಕು ವಾರಗಳ ಒಳಗಡೆ ಕೋವಿಡ್ 19 ಮೂರನೇ ಅಲೆಯು ಮಹಾರಾಷ್ಟ್ರ ಅಥವಾ ಮುಂಬೈಯನ್ನು ಅಪ್ಪಳಿಸುವ ಸಾಧ್ಯತೆಯಿದೆ ಎಂದು ಮಹಾರಾಷ್ಟ್ರ ಕೋವಿಡ್ ಕಾರ್ಯಪಡೆ ಎಚ್ಚರಿಕೆ ನೀಡಿದೆ.

ಸಮಾಧಾನದ ಸಂಗತಿ ಏನೆಂದರೆ ಮೂರನೇ ಅಲೆ ಬಂದರೂ ಮಕ್ಕಳಿಗೆ ಹೆಚ್ಚಿನ ಸಮಸ್ಯೆ ಆಗುವುದಿಲ್ಲ ಎಂದು ತಿಳಿಸಿದೆ. ಜನರು ಈಗ ಸಾಮಾಜಿಕ ಅಂತರ ನಿಯಮವನ್ನು ಉಲ್ಲಂಘಿಸಿ ಗುಂಪು ಗೂಡುವುದು ಹೆಚ್ಚಾಗುತ್ತಿರುವ ಕಾರಣ ಮೂರನೇ ಅಲೆ ಆರಂಭವಾಗಲಿದೆ ಎಂದು ತಜ್ಞರ ಸಮಿತಿ ಹೇಳಿದೆ.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದ್ದು, ಸಭೆಯಲ್ಲಿ ಕಾರ್ಯಪಡೆಯ ಸದಸ್ಯರು, ರಾಜ್ಯ ಆರೋಗ್ಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.  ಇದನ್ನೂ ಓದಿ: ಕೊರೊನಾಗೆ ಐದು ದಿನದ ಬಾಣಂತಿ ಸಾವು- ಮಗು ತಬ್ಬಲಿ

ಎರಡನೆಯ ಅಲೆಯಲ್ಲಿ ದಾಖಲಾಗಿದ್ದ ಪ್ರಕರಣಗಳಿಗಿಂತ ಎರಡು ಪಟ್ಟು ಹೆಚ್ಚು ಪ್ರಕರಣಗಳು ಮೂರನೇ ಅಲೆಯಲ್ಲಿ ದಾಖಲಾಗುವ ಸಾಧ್ಯತೆಯಿದೆ ಎಂದು ಸಮಿತಿ ಎಚ್ಚರಿಕೆ ನೀಡಿದೆ.

ಕಾರ್ಯಪಡೆಯ ಸದಸ್ಯ ಡಾ.ಶಶಾಂಕ್ ಜೋಷಿ ಮಾತನಾಡಿ, ಬ್ರಿಟನ್‍ನಲ್ಲಿ ಎರಡನೇ ಅಲೆ ಕಡಿಮೆಯಾದ ನಾಲ್ಕು ವಾರದ ಒಳಗಡೆ ಮೂರನೇ ಅಲೆ ಆರಂಭವಾಗಿತ್ತು. ಹೀಗಾಗಿ ಈಗಲೇ ನಾವು ಕೋವಿಡ್ ನಿಯಮಗಳನ್ನು ಸರಿಯಾಗಿ ಪಾಲಿಸದೇ ಇದ್ದರೆ ರಾಜ್ಯದಲ್ಲೂ ನಾವು ಮೂರನೇ ಅಲೆಯನ್ನು ಕಾಣಬಹುದು ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *