2 ರಿಂದ 18ರ ವಯಸ್ಸಿನವರ ಮೇಲೆ 10-12 ದಿನದಲ್ಲಿ ಕೊವಾಕ್ಸಿನ್ ಪ್ರಯೋಗ

ನವದೆಹಲಿ: ಎರಡರಿಂದ 18 ವಯಸ್ಸಿನನವರ ಮೇಲೆ ಭಾರತ್ ಬಯೋಟೆಕ್ ಕಂಪನಿಯ ಕೊವಾಕ್ಸಿನ್ ಲಸಿಕೆಯ ವೈದ್ಯಕೀಯ ಪ್ರಯೋಗ 10-12 ದಿನಗಳ ಒಳಗಡೆ ಆರಂಭವಾಗಲಿದೆ.

ಮೂರನೇ ಕೊರೊನಾ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬ ಸುದ್ದಿಯ ಬೆನ್ನಲ್ಲೇ ಭಾರತದಲ್ಲೂ ಮಕ್ಕಳ ಮೇಲೆ ಪ್ರಯೋಗ ನಡೆಸಲು ಸಿದ್ಧತೆ ನಡೆಸಲಾಗುತ್ತದೆ.

ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನೀತಿ ಆಯೋಗದ ಸದಸ್ಯ (ಆರೋಗ್ಯ ವಿಭಾಗ) ಡಾ.ವಿ.ಕೆ.ಪೌಲ್, ಮಕ್ಕಳ ಮೇಲೆ ಕೊವಾಕ್ಸಿನ್ ಲಸಿಕೆಯ ವೈದ್ಯಕೀಯ ಪ್ರಯೋಗ 10-12 ದಿನಗಳಲ್ಲಿ ಆರಂಭವಾಗಲಿದೆ ಎಂದು ತಿಳಿಸಿದರು.

ಕೊವಾಕ್ಸಿನ್ ಲಸಿಕೆಯನ್ನು 2ರಿಂದ 18 ವರ್ಷದವರ ಮೇಲೆ ಎರಡು ಮತ್ತು ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಅನುಮತಿ ನೀಡಿದೆ ಎಂದು ವಿವರಿಸಿದರು. ಭಾರತದ ಹಲವು ವೈದ್ಯಕೀಯ ಸಂಸ್ಥೆಗಳಲ್ಲಿ 525 ಮಕ್ಕಳ ಮೇಲೆ ಕೊವಾಕ್ಸಿನ್ ಲಸಿಕೆ ಪ್ರಯೋಗ ನಡೆಸಲು ಸಿದ್ಧತೆ ನಡೆದಿದೆ.

5 ರಿಂದ 18 ವರ್ಷ ವಯಸ್ಸಿನವರಲ್ಲಿ ಲಸಿಕೆ ಪ್ರಯೋಗ ನಡೆಸಲು ಅನುಮತಿ ನೀಡುವಂತೆ ಫೆಬ್ರುವರಿಯಲ್ಲಿ ಭಾರತ್ ಬಯೋಟೆಕ್ ಮನವಿ ಮಾಡಿತ್ತು. ಈ ಸಮಯದಲ್ಲಿ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‍ಸಿಒ) ವಯಸ್ಕರ ಮೇಲೆ ಈ ಲಸಿಕೆಯ ಪರಿಣಾಮದ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿತ್ತು.

ಕೆಲವು ಷರತ್ತುಗಳನ್ನು ವಿಧಿಸಿ ಲಸಿಕೆಯ ಪ್ರಯೋಗಕ್ಕೆ ಸಿಡಿಎಸ್‍ಸಿಒ ವಿಷಯ ತಜ್ಞರ ಸಮಿತಿ ಶಿಫಾರಸು ಮಾಡಿತ್ತು. ಶಿಫಾರಸಿನ ಹಿನ್ನೆಲೆಯಲ್ಲಿ ಮೇ 11 ರಂದು ಮಕ್ಕಳ ಮೇಲೆ ಲಸಿಕೆ ಪ್ರಯೋಗಕ್ಕೆ ಡಿಸಿಜಿಐ ಕೊವಾಕ್ಸಿನ್‍ಗೆ ಅನುಮತಿ ನೀಡಿತ್ತು.

12 ರಿಂದ 15 ವರ್ಷ ವಯಸ್ಸಿನವರಿಗೆ ಅಮೆರಿಕ ಮತ್ತು ಕೆನಡಾ ಫೈಝರ್ ಲಸಿಕೆಯನ್ನು ವಿತರಿಸಲು ಅನುಮತಿ ನೀಡಿದೆ.

Comments

Leave a Reply

Your email address will not be published. Required fields are marked *