2 ಪಕ್ಷಗಳ ಪರ ನವೀನ್ ಪೋಸ್ಟ್‌ – ಸ್ಟೇಟಸ್‌ ಹಿಂದಿತ್ತು ಮಾಸ್ಟರ್‌ ಪ್ಲಾನ್‌

ಬೆಂಗಳೂರು: ಆರೋಪಿ ನವೀನ್‌ ʼಬೆಂಕಿ ಪೋಸ್ಟ್‌ʼನಿಂದ ಬೆಂಗಳೂರು ಹೊತ್ತಿ ಉರಿದಿದ್ದು ಈಗ ಇತಿಹಾಸ. ಆದರೆ ನವೀನ್‌ ಒಮ್ಮೆ ಬಿಜೆಪಿ ಕಾರ್ಯಕರ್ತ ಮತ್ತೊಮ್ಮೆ ಕಾಂಗ್ರೆಸ್‌ ಕಾರ್ಯಕರ್ತನಂತೆ ಪೋಸ್ಟ್‌ ಯಾಕೆ ಹಾಕುತ್ತಿದ್ದ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ನವೀನ್‌ ಮುಸ್ಲಿಮ್‌ ಧರ್ಮದ ವಿರುದ್ಧವಾಗಿ, ಬಿಜೆಪಿ ಪರವಾಗಿ, ಕಾಂಗ್ರೆಸ್‌ ಅಭಿಮಾನಿಯಾಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕುತ್ತಿದ್ದ. ಒಂದೇ ಪಕ್ಷದ ಕಾರ್ಯಕರ್ತನಾಗಿದ್ದರೆ ಒಂದು ವಿಚಾರದ ಪರವಾದ ಬಗ್ಗೆ ಪೋಸ್ಟ್‌ ಹಾಕುತ್ತಿದ್ದ. ಆದರೆ ಈತ ಒಮ್ಮೊಮ್ಮೆ ಒಂದೊಂದು ವಿಚಾರದ, ವ್ಯಕ್ತಿಗಳಿಗೆ ಸಂಬಂಧಿಸಿದ ಪೋಸ್ಟ್‌ ಹಾಕುವ ಮೂಲಕ ಈತ ಯಾರ ಪರವಾಗಿದ್ದಾನೆ ಎಂಬುದೇ ದೊಡ್ಡ ಪ್ರಶ್ನೆಯಾಗಿತ್ತು. ಆದರೆ ಈಗ ಈ ರೀತಿಯ ಪೋಸ್ಟ್‌ ಹಾಕಿ ಗೊಂದಲ ಮೂಡಿಸುವ ಹಿಂದೆ ದೊಡ್ಡ ಪ್ಲಾನ್‌ ಅಡಗಿತ್ತು ಎಂಬ ವಿಚಾರ ಈಗ ತಿಳಿದು ಬಂದಿದೆ.

ಅಖಂಡ ಶ್ರೀನಿವಾಸ ಮೂರ್ತಿ ಜೆಡಿಎಸ್‌ನಲ್ಲಿದ್ದು ಕಳೆದ ಚುನಾವಣೆಯಲ್ಲಿ ಪುಲಿಕೇಶಿ ನಗರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಅಖಂಡ ಅವರ ಅಕ್ಕನ ಮಗನಾದ ನವೀನ್‌ಗೆ ಸಹ ರಾಜಕೀಯದಲ್ಲಿ ಬೆಳೆಯಬೇಕೆಂಬ ಆಸೆ ವ್ಯಕ್ತವಾಗಿತ್ತು. ಆದರೆ ಅಖಂಡ ಅವರು ನವೀನ್‌ ರಾಜಕೀಯ ಬರುವುದನ್ನು ತಿರಸ್ಕರಿಸಿದ್ದರು.

ಅಖಂಡ ಶ್ರೀನಿವಾಸಮೂರ್ತಿ ಬಹುತೇಕ ಫ್ಯಾಮಿಲಿ ರಾಜಕೀಯ ಹಿನ್ನಲೆಯವರಾಗಿದ್ದು ಅಕ್ಕನನ್ನು ಏಳೆಂಟು ವರ್ಷದ ಹಿಂದೆಯೇ ಅಖಾಡಕ್ಕೆ ಇಳಿಸಿದ್ದರು. ನಂತರ ಸಹೋದರ ಮಹೇಶ್‍ರನ್ನು ಕೂಡ ರಾಜಕೀಯವಾಗಿ ಬೆಳೆಯಲು ಶ್ರಮ ಪಟ್ಟಿದ್ದರು. ಈ ಕಾರಣಕ್ಕೆ ಮಾವನಾಗಿರುವ ಶ್ರೀನಿವಾಸ ಮೂರ್ತಿ ನನ್ನನ್ನೂ ಅವರಂತೆ ಬೆಳೆಸಲಿ ಎಂದು ಕಾಯುತ್ತಿದ್ದ. ಆದರೆ ಅಖಂಡ ಅವರು ಈತನನ್ನು ಕಡೆಗಣಿಸಿದ್ದರು. ಈ ಕಾರಣಕ್ಕೆ ಬಿಜೆಪಿ ಪರ ಪೋಸ್ಟ್‌ ಹಾಕಿ ಗೊಂದಲ ಮೂಡಿಸುತ್ತಿದ್ದ ಎಂಬ ವಿಚಾರ ಈಗ ಮೂಲಗಳಿಂದ ತಿಳಿದು ಬಂದಿದೆ.

ಮುಸ್ಲಿಂ ಮುಖಂಡರು ನೀಡಿರುವ ದೂರು ಆಧರಿಸಿ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ನವೀನ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

ರಮ್ಜಾನ್ ಸಂದರ್ಭದಲ್ಲಿ ಆರೋಪಿ, ತನ್ನ ಫೋಟೊ ಹಾಗೂ ಅಖಂಡ ಶ್ರೀನಿವಾಸಮೂರ್ತಿ ಫೋಟೊ ಸೇರಿಸಿ ಮುಸ್ಲಿಂ ಬಾಂಧವರಿಗೆ ಶುಭ ಕೋರಿದ್ದ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ “ಈ ಬಾರಿ ಬಿಜೆಪಿಗೆ ಮತ ಹಾಕಿದ್ದೇನೆ. ಚುನಾವಣೆ ದಿನ ಮಳೆ ಇತ್ತು. ಹೀಗಾಗಿ, ಮೇ 23ರ ಫಲಿತಾಂಶದಂದು ಕಮಲ ಅರಳಲಿದೆ” ಎಂದು ಬರೆದುಕೊಂಡಿದ್ದ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ನವೀನ್‌ ಬಿಜೆಪಿ ಏಜೆಂಟ್‌ ಎಂದು ದೂರಿದ್ದರೆ ಬಿಜೆಪಿಯವರು ಈತ ಕಾಂಗ್ರೆಸ್‌ ಪರವಾಗಿ ಮಾಡಿರುವ ಪೋಸ್ಟ್‌ಗಳನ್ನು ಹಾಕಿ ಇದಕ್ಕೆ ಏನು ಹೇಳುತ್ತಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *