2 ತಿಂಗ್ಳ ನಂತರ ಮನೆಗೆ ಬಂದ ನರ್ಸಿಂಗ್ ಆಫೀಸರ್- ಜನರಿಂದ ಹೃದಯ ಸ್ಪರ್ಶಿ ಸ್ವಾಗತ

– ಕೊರೊನಾ ಐಸೊಲೇಷನ್ ವಾರ್ಡಿನಲ್ಲಿ ಕೆಲಸ

ಧಾರವಾಡ: ಕೊರೊನಾ ಐಸೊಲೇಷನ್ ವಾರ್ಡಿನಲ್ಲಿ ಕಳೆದ ಎರಡು ತಿಂಗಳಿಂದ ಕೆಲಸ ನಿರ್ವಹಣೆ ಮಾಡಿದ ವಾಪಸ್ ಬಂದಿರುವ ನರ್ಸಿಂಗ್ ಆಫೀಸರ್ ಒಬ್ಬರಿಗೆ ಜನರು ಹೃದಯ ಸ್ಪರ್ಶಿ ಸ್ವಾಗತ ಕೋರಿದ್ದಾರೆ.

ಹೌದು. ಧಾರವಾಡ ನಗರದ ಜೆಎಸ್‍ಎಸ್ ಕಾಲೇಜು ಎದುರಿನ ಮಧು ಅಪಾರ್ಟ್‍ಮೆಂಟ್ ನಿವಾಸಿ ಜ್ಯೋತಿ ಕಲ್ಲೂರಮಠ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ನರ್ಸಿಂಗ್ ಆಫೀಸರ್ ಆಗಿ ಕಾರ್ಯನಿರ್ವಹಿಸಿ ವಾಪಸ್ ಬಂದಿದ್ದಾರೆ. ಇವರು ಬರುತ್ತಿದ್ದಂತೆಯೇ ಅಪಾರ್ಟ್‍ಮೆಂಟ್ ನಿವಾಸಿಗಳು ತಬ್ಬಿಕೊಂಡು ಇವರನ್ನು ಸ್ವಾಗತಿಸಿದರು. ಅಲ್ಲದೇ ಹಿರಿಯ ಅಜ್ಜಿಯರು ಜ್ಯೋತಿ ಅವರಿಗೆ ಉಡಿ ತುಂಬುವ ಮೂಲಕ ಸ್ವಾಗತಿಸಿಕೊಂಡಿದ್ದಾರೆ.

ಜ್ಯೋತಿ ಅವರ ಮಗ ಅಭಯ್ ಕೂಡ ತಾಯಿಗೆ ಹೂವು ಕೊಟ್ಟು ಮನೆಗೆ ಸ್ವಾಗತ ಕೋರಿದ್ದಾನೆ. ಈ ವೇಳೆ ತಮ್ಮ ಮಗನಿಂದ ದೂರ ಇದ್ದ ಜ್ಯೋತಿ ಮಗ ಹೂವು ಕೊಟ್ಟು ಸ್ವಾಗತಿಸುತ್ತಿದ್ದಂತೆಯೇ ಕಣ್ಣೀರು ಹಾಕಿದ್ದಾರೆ. ಕಳೆದ ಎರಡು ತಿಂಗಳಿಂದ ಮಗನ ಮುಖ ನೋಡಿರಲಿಲ್ಲ. ಮನೆಯಲ್ಲಿ ವಯಸ್ಸಾದ ಅತ್ತೆ ಕೂಡ ಇದ್ದಾರೆ. ಮಗನ ವಯಸ್ಸು ಚಿಕ್ಕದು ಹಾಗೂ ಅತ್ತೆಗೂ ವಯಸ್ಸು ಆಗಿದ್ದರಿಂದ ಹೇಗೆ ಇವರು ಮನೆಯಲ್ಲಿ ಎಲ್ಲ ಕೆಲಸಗಳನ್ನು ನಿರ್ವಹಣೆ ಮಾಡಿಕೊಳ್ಳತ್ತಾರೆ ಎಂಬ ಚಿಂತೆ ಆಗಿತ್ತು ಎಂದು ಜ್ಯೋತಿ ಹೇಳಿದ್ದಾರೆ.

ಪತಿ ಕೂಡ ಮಗನ ಜೊತೆ ಇದ್ದರೂ ತಾಯಿಯಂತೆ ಆಗಲ್ಲ. ಹೀಗಾಗಿ ಇದನ್ನೆಲ್ಲ ನೆನೆದು ಕಣ್ಣೀರು ಹಾಕಿದ ಜ್ಯೋತಿ, ತನಗೆ ಸ್ವಾಗತ ಕೋರಿದ ಎಲ್ಲ ಜನರಿಗೆ ಧನ್ಯವಾದ ಅರ್ಪಣೆ ಮಾಡಿದ್ದರು. ಅಪಾರ್ಟ್‍ಮೆಂಟ್ ಜನರು ಜ್ಯೋತಿಗೆ ಹೂವಿನ ಜೊತೆಗೆ ಚಪ್ಪಾಳೆ ತಟ್ಟುವ ಮೂಲಕ ಸ್ವಾಗತ ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *