19 ಏಜ್ ಈಸ್ ನಾನ್ಸೆನ್ಸ್ ಅಂದ ಮನುಷ್ ಹೇಗೆ ತಯಾರಾದ ಗೊತ್ತೇ?

ಹತ್ತೊಂಬತ್ತರ ಹರೆಯದಲ್ಲಿ ತೆಗೆದುಕೊಳ್ಳುವ ಬಹುತೇಕ ನಿರ್ಧಾರಗಳು ನಾನ್ಸೆನ್ಸ್ ಆಗಿರುತ್ತವೆ ಅಂತೊಂದು ಮಾತಿದೆ. ಕಲ್ಲಿಗೆ ಡಿಚ್ಚಿ ಹೊಡೆದು ನೀರುಕ್ಕಿಸಿ ಬಿಡಬಲ್ಲೆನೆಂಬ ಸಿನಿಮ್ಯಾಟಿಕ್ ಮನಸ್ಥಿತಿ ಆ ವಯಸ್ಸನ್ನು ಕವುಚಿಕೊಂಡಿರುತ್ತದೆ. ಅಂಥಾ ಭ್ರಾಂತು ವಾಸ್ತವಗಳೊಂದಿಗೆ ಮುಖಾಮುಖಿಯಾಗಲು ಸಾಧ್ಯವೇ ಇಲ್ಲ. ಈ ವಯಸಿನ ಉನ್ಮಾದಗಳನ್ನು ತುಂಬಿಕೊಂಡಿರೋ ಚಿತ್ರ 19 ಏಜ್ ಈಸ್ ನಾನ್ಸೆನ್ಸ್. ಅದನ್ನು ಆ ವಯೋಮಾನದ ಹುಡುಗನೇ ನಿಭಾಯಿಸಿದರೆ ಸಹಜವಾಗಿ ಮೂಡಿ ಬರುತ್ತದೆಂಬ ಕಾರಣದಿಂದಲೇ ಮನುಷ್ ಎಂಬ ಹತ್ತೊಂಬತ್ತರ ಹುಡುಗ ಈ ಸಿನಿಮಾದ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರ ಡಿಸೆಂಬರ್ 6ರಂದು ತೆರೆಗಾಣಲಿದೆ.

ಅಂದಹಾಗೆ ಇದು ಲೋಕೇಶ್ ನಿರ್ಮಾಣ ಮಾಡಿರುವ ಚಿತ್ರ. ಈ ಸಿನಿಮಾ ನಾಯಕ ಮನುಷ್ ನಿರ್ಮಾಪಕರ ಪುತ್ರ. ಅಪ್ಪ ಕಾಸು ಹೂಡಿರೋದರಿಂದ ಮಗ ಹೀರೋ ಆಗಿದ್ದಾನೆಂದು ಯಾರೆಂದರೆ ಯಾರೂ ಅಂದುಕೊಳ್ಳುವಂತಿಲ್ಲ. ಯಾಕೆಂದರೆ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಟ್ರೇಲರ್ ನಲ್ಲಿ ಮನುಷ್ ಅಷ್ಟೊಂದು ಪರಿಣಾಮಕಾರಿಯಾಗಿ ಕಾಣಿಸಿಕೊಂಡಿದ್ದಾನೆ. ನಟನೆಯಲ್ಲಿ ಮೊದಲ ಅನುಭವವಾದರೂ ಸಹ ಆ ಸುಳಿವನ್ನು ಎಲ್ಲಿಯೂ ಬಿಟ್ಟುಕೊಡದಂತೆ ಮನುಷ್ ನಟಿಸಿದ್ದಾರೆ.

ಸುರೇಶ್ ಎಂ ಗಿಣಿ ಹೇಳಿದ ಕಥೆ ಕೇಳಿ ಅದರಲ್ಲಿ ನಾಯಕನ ಚಹರೆ ನೋಡಿದಾಗ ತಮ್ಮ ಮಗ ಮನುಷ್ ಯಾಕೆ ಅದರಲ್ಲಿ ನಟಿಸಬಾರದೆಂಬ ಪ್ರಶ್ನೆ ನಿರ್ಮಾಪಕ ಲೋಕೇಶ್ ಅವರನ್ನು ಕಾಡಿತ್ತಂತೆ. ಅದಕ್ಕೆ ಕಾರಣವಾಗಿದ್ದು ಮನುಷ್‍ನ ಸಿನಿಮಾ ಹುಚ್ಚು. ಇದೀಗ ಮೊದಲ ವರ್ಷದ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿರೋ ಮನುಷ್‍ಗೆ ಓದಿಗಿಂತಲೂ ಸಿನಿಮಾಸಕ್ತಿಯೇ ಹೆಚ್ಚಾಗಿತ್ತು. ನಂತರ ಆತನಿಗೆ ನಟನೆ ಸೇರಿದಂತೆ ಎಲ್ಲದರಲ್ಲಿ ತರಬೇತಿ ಕೊಡಿಸಿಯೇ ಲೋಕೇಶ್ ಹೀರೋ ಆಗಿಸಿದ್ದರು. ಈ ಕಾರಣದಿಂದಲೇ ರೊಮ್ಯಾಂಟಿಕ್ ಸೀನು, ಸೆಂಟಿಮೆಂಟ್, ಮಾಸ್ ಸನ್ನಿವೇಶಗಳು ಸೇರಿದಂತೆ ಎಲ್ಲದರಲ್ಲಿಯೂ ಮನುಷ್ ಚೆಂದದ ನಟನೆ ಕೊಟ್ಟಿದ್ದಾನೆ.

Comments

Leave a Reply

Your email address will not be published. Required fields are marked *