18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿ, ಕಾಲೇಜು ತೆರೆಯಿರಿ – ತಜ್ಞರ ವರದಿಯಲ್ಲಿ ಏನಿದೆ?

ಬೆಂಗಳೂರು: 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಿ ಕಾಲೇಜುಗಳನ್ನು ಪ್ರಾರಂಭಿಸುವಂತೆ ಡಾ. ದೇವಿ ಶೆಟ್ಟಿ ನೇತೃತ್ವದ ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ.

3ನೇ ಅಲೆ ತಡೆಗಟ್ಟುವ ಕುರಿತು ಡಾ. ದೇವಿ ಪ್ರಸಾದ್ ಶೆಟ್ಟಿ ನೇತೃತ್ವದ ತಜ್ಞರ ಸಮಿತಿ ಜೊತೆ ಇಂದು ಸಿಎಂ ಸಭೆ ನಡೆಸಿ ಚರ್ಚಿಸಿದರು. ಸಮೂರನೇ ಅಲೆ ಸಂದರ್ಭದಲ್ಲಿ ಮಕ್ಕಳಿಗೆ ಹೆಚ್ಚಾಗಿ ಸೋಂಕು ತಗಲುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಜ್ಞರ ಸಮಿತಿಯು ಕೆಲವು ಶಿಫಾರಸುಗಳನ್ನು ಮಾಡಿದೆ.

ಶಿಫಾರಸಿನಲ್ಲಿ ಏನಿದೆ?
ಜಿಲ್ಲೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ, ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಮಕ್ಕಳ ಹೆಚ್.ಡಿ.ಯು ಘಟಕ, ಮಕ್ಕಳ ತೀವ್ರ ನಿಗಾ ಘಟಕ ಸ್ಥಾಪನೆ, ಮಕ್ಕಳ ಆಸ್ಪತ್ರೆ ಸ್ಥಾಪನೆ ಕುರಿತು ಸಲಹೆ ನೀಡಿದೆ.

3ನೇ ಅಲೆ ತಡೆಗಟ್ಟಲು ಮಾನವ ಸಂಪನ್ಮೂಲ, ಆರ್ಥಿಕ ಸಂಪನ್ಮೂಲ ಹಾಗೂ ಪರಿಣತರ ನೆರವು ಪಡೆಯುವ ಕುರಿತು ಸಹ ಸಮಿತಿ ಸಲಹೆ ನೀಡಿದೆ. ವಿವಿಧ ವೈದ್ಯಕೀಯ ಸಂಘಟನೆಗಳ ಸಹಯೋಗದೊಂದಿಗೆ ವೈದ್ಯರು, ದಾದಿಯರ ಕೊರತೆ ನಿವಾರಣೆ, ರಾಜ್ಯದಲ್ಲಿರುವ ಎಲ್ಲ ಸ್ವಯಂ ಸೇವಾ ಸಂಸ್ಥೆಗಳ ನೆರವು ಪಡೆಯುವುದು, ಕಾರ್ಪೊರೇಟ್ ಸಂಸ್ಥೆಗಳ ಸಹಕಾರದಿಂದ ಸಂಪನ್ಮೂಲಗಳ ನೆರವು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಸಾರ್ವಜನಿಕರ ಸಹಭಾಗಿತ್ವ ಪಡೆಯುವ ಬಗ್ಗೆ ಸಲಹೆ ನೀಡಿದೆ. ಇದನ್ನೂ ಓದಿ: ದೀರ್ಘ ರಜೆ ಬಳಿಕ ಭಾರತಕ್ಕೆ ಹಿಂದಿರುಗಿದ ಆದಾರ್ ಪೂನಾವಾಲಾ

ಅಪೌಷ್ಟಿಕತೆ ನಿವಾರಣೆಗೆ ಆದ್ಯತೆ ನೀಡಬೇಕು. ಕೋವಿಡ್ ಗೆ ತುತ್ತಾದ ಮಕ್ಕಳ ಮನೋಸ್ಥೈರ್ಯ ಹೆಚ್ಚಿಸಲು ಪ್ರತಿ ಆಸ್ಪತ್ರೆಯಲ್ಲಿ ಮನೋವೈದ್ಯರ ಸೇವೆ ಒದಗಿಸುವುದು ಸೂಕ್ತ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಆಮ್ಲಜನಕ ಕೊರತೆ ನಿವಾರಣೆ ಕುರಿತು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಲಹೆ ನೀಡಿದೆ. ಕೋವಿಡ್ ನಂತರ ತಲೆದೋರುವ ಆರೋಗ್ಯ ಸಮಸ್ಯೆಗಳ ಕುರಿತು ಎಚ್ಚರ ವಹಿಸುವ ಕುರಿತು ಹಾಗೂ ಕೋವಿಡ್ ಅಲ್ಲದೆ ಇತರ ಆರೋಗ್ಯ ಸಮಸ್ಯೆಗಳಿಗೂ ಆದ್ಯತೆ ನೀಡುವ ಅಗತ್ಯವಿದೆ.

ಕೋವಿಡ್ ನಿಯಂತ್ರಣಕ್ಕೆ ಲಸಿಕೆ ಅತ್ಯಂತ ಸೂಕ್ತ ಪರಿಹಾರವಾಗಿದ್ದು, ಲಸಿಕೆ ಅಭಿಯಾನ ಇನ್ನಷ್ಟು ತೀವ್ರಗೊಳಿಸಲು ಸಲಹೆ ನೀಡಿದೆ.

ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದಕ್ಕೆ ಲಸಿಕೆ ನೀಡಲು ಆದ್ಯತೆ ನೀಡುವಂತೆ ಸಲಹೆ ಮಾಡಲಾಗಿದೆ. ಶಾಲಾ ಕಾಲೇಜುಗಳನ್ನು ಹಂತ ಹಂತವಾಗಿ ತೆರೆಯುವ ಬಗ್ಗೆ ಚಿಂತನೆ ನಡೆಸಬೇಕು. 18 ವಯಸ್ಸಿನ ಮೇಲಿನ ಮಕ್ಕಳಿಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಿ ಕಾಲೇಜುಗಳನ್ನು ಪ್ರಾರಂಭಿಸಬೇಕು ಎಂದು ಸಲಹೆ ನೀಡಿದೆ.

Comments

Leave a Reply

Your email address will not be published. Required fields are marked *