18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಸ್ಥಗಿತ – ಸಿಎಂ ಮನೆಗೆ ಸಂಸದ ಸಿದ್ದೇಶ್ವರ್ ಮುತ್ತಿಗೆ ಎಚ್ಚರಿಕೆ

ಬೆಂಗಳೂರು: ದೇಶದಲ್ಲಿ ಇಲ್ಲಿವರೆಗೆ 16 ಕೋಟಿ 49 ಲಕ್ಷದ 73 ಸಾವಿರದ 058 ಜನರಿಗೆ ವ್ಯಾಕ್ಸಿನೇಷನ್ ಆಗಿದೆ. ಆದರೆ ವ್ಯಾಕ್ಸಿನ್ ಕೊರತೆ ಹೆಚ್ಚಾಗ್ತಿದೆ. ಈ ಹಿನ್ನೆಲೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನೀಡದಂತೆ ಆಸ್ಪತ್ರೆಗಳಿಗೆ ಬಿಬಿಎಂಪಿ ಆದೇಶಿಸಿದೆ.

2ನೇ ಡೋಸ್ ನೀಡೋವ್ರಿಗೆ ಅಗತ್ಯ ವ್ಯಾಕ್ಸಿನ್ ಕೊರತೆ ಆಗಬಹುದು. ಹಾಗಾಗಿ ಮುಂದಿನ ಆದೇಶದವರೆಗೂ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ಕೊಡಬೇಡಿ ಅಂತ ಸೂಚಿಸಿದೆ. ವ್ಯಾಕ್ಸಿನ್ ಕೊರತೆ ಇದೆ ಅನ್ನೋದು ಗೊತ್ತಿದ್ದರೂ ಕೂಡ ಅದ್ಯಾರನ್ನ ಮೆಚ್ಚಿಸೋಕೋ ಏನೋ ಸಿಎಂ ಯಡಿಯೂರಪ್ಪ ಮೇ 1 ರಂದು ಚಾಲನೆ ನೀಡಿದ್ದ ವ್ಯಾಕ್ಸಿನೇಷನ್‍ಗೆ 7 ದಿನಗಳಲ್ಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ಬ್ರೇಕ್ ಬಿದ್ದಿದೆ.

ಆದರೆ 70 ಲಕ್ಷ ಜನರು ಮೊದಲ ಡೋಸ್ ಪಡೆದಿದ್ದಾರೆ. 2ನೇ ಡೋಸ್ ಪಡೆಯೋರಿಗೆ ಆದ್ಯತೆ ಮೇಲೆ ಲಸಿಕೆ ಕೊಡ್ತೀವಿ ಅಂತ ಸಚಿವ ಸುಧಾಕರ್ ಹೇಳಿದ್ದಾರೆ. ಬೆಂಗಳೂರಿನ ಮಲ್ಲತ್ತಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು 45 ವರ್ಷ ಮೇಲ್ಪಟ್ಟವರು ವ್ಯಾಕ್ಸಿನ್‍ಗಾಗಿ ಕಿತ್ತಾಡಿ, ಕೂಗಾಡಿದ ಘಟನೆಯೂ ನಡೆದಿದೆ.

ದಾವಣಗೆರೆಗೆ ಅಗತ್ಯ ವ್ಯಾಕ್ಸಿನ್ ನೀಡದಿದ್ದರೆ ಸಿಎಂ ಮನೆ ಮುಂದೆ ಧರಣಿ ಮಾಡ್ತೇನೆ ಅಂತ ಸಂಸದ ಸಿದ್ದೇಶ್ವರ್ ಧಮ್ಕಿ ಹಾಕಿದ್ದಾರೆ. ಈ ಮಧ್ಯೆ, ಕೊರೋನಾ ಕಾಲದಲ್ಲಿ ಮತ್ತೆ ಉಸ್ತುವಾರಿ ಸಚಿವರನ್ನು ಬದಲಾಯಿಸಿ ಸಿಎಂ ಆದೇಶಿಸಿದ್ದಾರೆ. ಲಿಂಬಾವಳಿಗೆ ಕೋಲಾರ, ಶಂಕರ್‍ಗೆ ಯಾದಗಿರಿ ಮತ್ತು ಪ್ರಭು ಚೌಹಾಣ್‍ಗೆ ಬೀದರ್ ಉಸ್ತುವಾರಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *