ದುಬೈನಿಂದ ಮಂಗಳೂರಿಗೆ ಆಗಮಿಸಲಿದ್ದಾರೆ 177 ಕರಾವಳಿಗರು

– ವಿಮಾನ ನಿಲ್ದಾಣದಿಂದ ನೇರ ಕ್ವಾರಂಟೈನ್ ಕೇಂದ್ರಕ್ಕೆ ಶಿಫ್ಟ್

ಮಂಗಳೂರು: ಕೊರೊನಾದಿಂದ ವಿದೇಶದಲ್ಲಿ ಸಿಲುಕಿಕೊಂಡಿದ್ದ 177 ಕರಾವಳಿಗರು ಇಂದು ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.

ಏರ್ ಇಂಡಿಯಾ IX 0384 ವಿಮಾನದ ಮೂಲಕ ದುಬೈನಿಂದ ಭಾರತೀಯ ಕಾಲಮಾನ ಸಂಜೆ 4:10ಕ್ಕೆ ವಿಮಾನ ಹೊರಡಲಿದ್ದು, ರಾತ್ರಿ ಸುಮಾರು 9:10 ಗಂಟಗೆ ಮಂಗಳೂರು ವಿಮಾನ ನಿಲ್ದಾಣ ತಲುಪುವ ಸಾಧ್ಯತೆ ಇದೆ. ದುಬೈಯಿಂದ ಬರುವ 177 ಪ್ರಯಾಣಿಕರಲ್ಲಿ ಎಷ್ಟು ಮಹಿಳೆಯರು, ಪುರುಷರು ಹಾಗೂ ಗರ್ಭಿಣಿಯರು, ಆರೋಗ್ಯ ಸಮಸ್ಯೆ ಎಂಬುವುದು ದುಬೈ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಬೋರ್ಡಿಂಗ್ ಆದ ಬಳಿಕವಷ್ಟೇ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.

ಮಂಗಳೂರು ವಿಮಾನ ನಿಲ್ದಾಣ ತಲುಪಿದ ನಂತರ ಎಲ್ಲರ ಆರೋಗ್ಯ ತಪಾಸಣೆ ನಡೆಸಿ, 17 ವಸತಿಗೃಹ, 12 ಹಾಸ್ಟೆಲ್‍ಗಳಲ್ಲಿ ಕ್ವಾರಂಟೈನ್‍ಗೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ವಿದೇಶದಿಂದ ಬರುವವರನ್ನು ಎ ಹಾಗೂ ಬಿ ಎಂದು ಎರಡು ವಿಭಾಗ ಮಾಡಲಾಗುತ್ತದೆ. ಕೆಮ್ಮು ಜ್ವರ ಇರುವವರನ್ನು ಎ ವಿಭಾಗದಲ್ಲಿ ಸೇರಿಸಿ ವೆನ್ಲಾಕ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಬಿ ವಿಭಾಗದವರನ್ನು ಹಾಸ್ಟೆಲ್, ಹೋಟೆಲ್‍ನಲ್ಲಿ ಕ್ವಾರಂಟೈನ್‍ಗೆ ವ್ಯವಸ್ಥೆ ಮಾಡಲಾಗಿದೆ.

ವಿಮಾನದಲ್ಲಿ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಭಾಗದ ಪ್ರಯಾಣಿಕರಿಗೆ ಅವಕಾಶ ನೀಡಲಾಗಿದ್ದು, ಕಾಸರಗೋಡು ಭಾಗದ ಪ್ರಯಾಣಿಕರಿಗೆ ವಿಮಾನದಲ್ಲಿ ಅವಕಾಶವಿಲ್ಲ. ಅಷ್ಟೇ ಅಲ್ಲದೆ ವಿಮಾನ ನಿಲ್ದಾಣಕ್ಕೆ ಸಾರ್ವಜನಿಕರಿಗೆ ಮತ್ತು ಕುಟುಂಬಸ್ಥರಿಗೆ ಪ್ರವೇಶ ನಿಷೇಧ ಮಾಡಲಾಗಿದ್ದು, ಆಸ್ಪತ್ರೆ, ಹೋಟೆಲ್ ಮತ್ತು ಸರ್ಕಾರ ನಿಗದಿಪಡಿಸಿದ ಜಾಗಗಳಗೆ ಕ್ವಾರಂಟೈನ್ ಮಾಡಲು ಜಿಲ್ಲಾಡಳಿತದಿಂದಲೇ ವಾಹನದ ಮೂಲಕ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗಿದೆ. ಕ್ವಾರಂಟೈನ್ ಕೇಂದ್ರಗಳಿಗೂ ಸಾರ್ವಜನಿಕರಿಗೆ ಪ್ರವೇಶ ನಿಷೇಧವಿದೆ. 14 ದಿನಗಳವರೆಗೆ ಕ್ವಾರಂಟೈನ್ ನಡೆದು ನಂತರ ತಮ್ಮ ಮನೆಗಳಲ್ಲಿ ಕ್ವಾರಂಟೈನ್ ಮುಂದುವರಿಯಲಿದೆ.

Comments

Leave a Reply

Your email address will not be published. Required fields are marked *