ಪಾಕ್ ತರಬೇತಿ ವಿಮಾನ ಪತನ – ಐವರು ಸಿಬ್ಬಂದಿ ಸೇರಿ 17 ಮಂದಿ ಸಾವು

ಇಸ್ಲಾಮಾಬಾದ್: ಪಾಕಿಸ್ತಾನದ ಸೇನಾ ತರಬೇತಿ ವಿಮಾನ ಪತನಗೊಂಡು, ಐವರು ಸಿಬ್ಬಂದಿ ಸೇರಿದಂತೆ 17 ಮಂದಿ ಮೃತಪಟ್ಟ ಘಟನೆ ಇಂದು ರಾವಲ್ಪಿಂಡಿ ಬಳಿ ನಡೆದಿದೆ.

ಲೆಫ್ಟಿನೆಂಟ್ ಕರ್ನಲ್ ಸಕೀಬ್, ಲೆಫ್ಟಿನೆಂಟ್ ಕರ್ನಲ್ ವಾಸಿಮ್, ನಾಯಬ್ ಸುಬೇದಾರ್ ಅಫ್ಜಲ್, ಹವಾಲ್ದಾರ್ ಅಮಿನ್ ಹಾಗೂ ಹವಾಲ್ದಾರ್ ರಹಮತ್ ಮೃತ ಸಿಬ್ಬಂದಿ. ಪ್ರತಿ ದಿನದಂತೆ ಇಂದು ಕೂಡ ತರಬೇತಿ ನೀಡಲಾಗುತ್ತಿತ್ತು. ದುರಾದೃಷ್ಟವಶಾತ್ ವಿಮಾನ ಪತನಗೊಂಡು ಭಾರೀ ಪ್ರಮಾಣದ ಹಾನಿ ಉಂಟು ಮಾಡಿದೆ.

ಸೇನಾ ವಲಯದ ಕೇಂದ್ರ ಕಚೇರಿಯಲ್ಲಿ ಇಂದು ತರಬೇತಿ ನೀಡಲಾಗುತ್ತಿತ್ತು. ಈ ವೇಳೆ ಸಣ್ಣ ವಿಮಾನವೊಂದು ಪತನಗೊಂಡು ವಸತಿ ಪ್ರದೇಶದ ಮೇಲೆ ಬಿದ್ದಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡಿತ್ತು. ಜೊತೆಗೆ ಸುತ್ತಮುತ್ತಲಿನ ಮನೆಗಳಿಗೂ ಬೆಂಕಿ ತಗುಲಿ ಭಾರೀ ಪ್ರಮಾಣದ ಸಾವು ನೋವು ಸಂಭವಿಸಿದೆ.

ಘಟನೆ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದರು. ಈ ವೇಳೆ 17 ಜನರ ಮೃತದೇಹಗಳು ಪತ್ತೆಯಾಗಿದ್ದು, ಅವುಗಳಲ್ಲಿ 5 ಮಿಲಿಟರಿ ಸಿಬ್ಬಂದಿ ಮತ್ತು 12 ನಾಗರಿಕರದ್ದಾಗಿದೆ. ಜೊತೆಗೆ 12 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಸುರಕ್ಷಣಾ ವಕ್ತಾರ ಫರೂಕ್ ಭಟ್ ಮಾಹಿತಿ ನೀಡಿದ್ದಾರೆ.

ಇತ್ತೀಚೆಗಷ್ಟೇ ಪಾಕಿಸ್ತಾನದ ಸೇನಾ ವಕ್ತಾರ ಆಸಿಫ್ ಗಫೂರ್ ಅವರು ಭಾರತೀಯ ವಾಯುಪಡೆಯನ್ನು ದುರ್ಬಲ ಎಂದು ಬಿಂಬಿಸು ಉದ್ದೇಶದಿಂದ ನಕಲಿ ವಿಡಿಯೋ ಪೋಸ್ಟ್ ಮಾಡಿದ್ದರು. ಈ ವಿಡಿಯೋ, ಫೆಬ್ರವರಿ 26ರ ಬಾಲಾಕೋಟ್ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ವಾಯುಪಡೆಗಳ ನಡುವೆ ನಡೆದಿದ್ದ ‘ವಾಯು ಸಮರ’ದಲ್ಲಿ ಭಾರತ ವೈಫಲ್ಯ ಅನುಭವಿಸಿತ್ತು ಎಂದು ಬಿಂಬಿಸುವಂತೆ ಇತ್ತು.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕೆಲವೇ ಗಂಟೆಗಳಲ್ಲಿ ಭಾರತದ ನೆಟ್ಟಿಗರು ಅದು ನಕಲಿ ಎಂದು ಪತ್ತೆ ಹಚ್ಚಿದ್ದರು. ಜೊತೆಗೆ ಆಸಿಫ್ ಗಫೂರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ ಕೆಲವರು ಗಫೂರ್ ಕಾಲೆಳೆದು ವ್ಯಂಗ್ಯವಾಡಿದ್ದರು. ನೆಟ್ಟಿಗರಿಂದ ನಗೆಪಾಟಲಿಗೆ ಗುರಿಯಾಗುತ್ತಿದ್ದಂತೆ ಆಸಿಫ್ ಗಫೂರ್ ಟ್ವೀಟ್ ಡಿಲಿಟ್ ಮಾಡಿದ್ದರು.

Comments

Leave a Reply

Your email address will not be published. Required fields are marked *