17 ಬಾರಿ ಇರಿದು ಮಗಳ ಪ್ರಿಯಕರನ ಕೊಂದ ತಂದೆ – ಆರೋಪಿ ಮನೆಗೆ ಬೆಂಕಿ ಹಚ್ಚಿ ಧ್ವಂಸ

ಚಿಕ್ಕಬಳ್ಳಾಪುರ: ಮಗಳ ಪ್ರಿಯಕರನನ್ನ 17 ಬಾರಿ ಇರಿದು ಕೊಲೆ ಮಾಡಿದ್ದ ತಂದೆ. ರೊಚ್ಚಿಗೆದ್ದ ಮೃತ ಯುವಕನ ಸಂಬಂಧಿಕರು ಆರೋಪಿಯ ಮನೆಯನ್ನ ಧ್ವಂಸ ಮಾಡಿ, ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಯಗವಮದ್ದಲಖಾನೆ ಗ್ರಾಮದಲ್ಲಿ ನಡೆದಿದೆ.

ಹರೀಶ್ (25) ಕೊಲೆಯಾದ ಯುವಕ. ಈತನ ಪ್ರೇಯಸಿಯ ತಂದೆ ವೆಂಕಟೇಶ್ ಹಾಗೂ ಚಿಕ್ಕಪ್ಪ ಸೇರಿಕೊಂಡು ಶುಕ್ರವಾರ ತಡರಾತ್ರಿ 17 ಬಾರಿ ಇರಿದು ಕೊಲೆ ಮಾಡಿದ್ದರು. ಈಗಾಗಲೇ ಆರೋಪಿಗಳನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಮಧ್ಯೆ ಯುವಕ ಹರೀಶ್ ಕೊಲೆಗೆ ಆಕ್ರೋಶಗೊಂಡ ಆತನ ಸಂಬಂಧಿಕರು ವೆಂಕಟೇಶ್ ಮನೆ ಮೇಲೆ ದಾಳಿ ಮಾಡಿದ್ದಾರೆ.

ಮನೆಗೆ ಬೀಗ ಹಾಕಿದ್ದರು ಮನೆಯ ಬೀಗವನ್ನ ಒಡೆದು ಹಾಕಿ, ಕಿಟಕಿ ಬಾಗಿಲುಗಳನ್ನ ಧ್ವಂಸ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮನೆಯೊಳಗೆ ನುಗ್ಗಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಬೆಂಕಿ ಹಚ್ಚುತ್ತಿದ್ದ ವೇಳೆ ಯುವಕನಿಗೆ ಬೆಂಕಿ ತಗುಲಿ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹರೀಶ್ ಸಂಬಂಧಿಕರಿಂದ ಇಡೀ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಎಷ್ಟೇ ಪ್ರಯತ್ನ ಪಟ್ಟರೂ ಪರಿಸ್ಥಿತಿಯನ್ನು ನಿಯಂತ್ರಿಸಲಾಗಲಿಲ್ಲ. ಹರೀಶ್‍ನನ್ನು ಆರೋಪಿಯ ಮನೆ ಬಳಿಯೇ ಮಣ್ಣು ಮಾಡಬೇಕು ಅಂತ ಪಟ್ಟುಹಿಡಿದ್ದಾರೆ. ಸದ್ಯಕ್ಕೆ ಸ್ಥಳಕ್ಕೆ ಎಸ್‍ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಏನಿದು ಪ್ರಕರಣ?
ಮೃತ ಹರೀಶ್ ಮತ್ತು ಕೊಲೆ ಮಾಡಿದ ವೆಂಕಟೇಶ್ ಮಗಳು ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ 10 ತಿಂಗಳ ಹಿಂದೆ ಇಬ್ಬರು ವಿವಾಹವಾಗಲು ಮನೆ ಬಿಟ್ಟು ಹೋಗಿದ್ದರು. ಈ ವೇಳೆ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರಾಜಿ ಪಂಚಾಯತಿ ಮೂಲಕ ಮಗಳನ್ನು ಆರೋಪಿ ತಂದೆ ಮನೆಗೆ ಕರೆದುಕೊಂಡು ಹೋಗಿದ್ದನು. ಆದರೆ ಮನೆಗೆ ಹೋದ ಯುವತಿ ಪ್ರಿಯಕರ ಹರೀಶ್ ಕೊರಗಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಳು.

ಅಂದಿನಿಂದ ಈ ಸಾವಿಗೆ ಪ್ರಿಯಕರ ಹರೀಶ್ ಕಾರಣ. ಅವನನ್ನ ಪ್ರೀತಿ ಮಾಡಿದ್ದರಿಂದಲೇ ನನ್ನ ಮಗಳ ಸಾವಾಯಿತು ಎಂದು ವೆಂಕಟೇಶ್ ಆಕ್ರೋಶಗೊಂಡಿದ್ದನು. ಕೊನೆಗೆ ಶುಕ್ರವಾರ ತಡರಾತ್ರಿ ಬೈಕಿನಲ್ಲಿ ತೆರಳುತ್ತಿದ್ದ ಹರೀಶ್‍ನನ್ನ ಹಿಂಬಾಲಿಸಿ ಕೊಲೆ ಮಾಡಿದ್ದಾನೆ.

ಬೈಕಿನಲ್ಲಿ ಹೋಗುತ್ತಿದ್ದಾಗ ಹರೀಶ್‍ಗೆ ಮೊದಲು ದೊಣ್ಣೆಯಲ್ಲಿ ಹೊಡೆದಿದ್ದಾರೆ. ನಂತರ ಚಾಕುವಿನಿಂದ ಎದೆಗೆ 17-18 ಬಾರಿ ಇರಿದು ಕೊಂದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬಾಗೇಪಲ್ಲಿ ಪೊಲೀಸರು ತಡರಾತ್ರಿಯೇ ಆರೋಪಿಗಳಾದ ವೆಂಕಟೇಶ್ ಹಾಗೂ ಗಣೇಶ್‍ನನ್ನ ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *