ಧಾರಾಕಾರ ಮಳೆಗೆ 101 ಬಾಗಿಲುಗಳುಳ್ಳ 160 ವರ್ಷಗಳ ಕಟ್ಟಡ ಕುಸಿತ

ರಾಯಚೂರು: ಧಾರಾಕಾರ ಮಳೆಗೆ ಜಿಲ್ಲೆಯ ಹಲವೆಡೆ ನಾನಾ ಅವಾಂತರಗಳು ಸೃಷ್ಟಿಯಾಗಿದ್ದು, ಲಿಂಗಸುಗೂರು ಪಟ್ಟಣದ 101 ಬಾಗಿಲುಗಳುಳ್ಳ 160 ವರ್ಷದ ಐತಿಹಾಸಿಕ ಕಟ್ಟಡ ಭಾಗಶಃ ಕುಸಿದಿದೆ.

ಬ್ರಿಟಿಷರ ಆಡಳಿತಾವಧಿಯಲ್ಲಿ ನಿರ್ಮಾಣವಾಗಿದ್ದ ಅಪರೂಪದ ವಿಶಿಷ್ಟ ಬಂಗಲೆ `ನೂರೊಂದು ಬಾಗಿಲಿನ ಬಂಗಲೆ’ ಎಂದೇ ಪ್ರಸಿದ್ಧಿ ಪಡೆದಿದೆ. ಈಗಲೂ ಸರ್ಕಾರಿ ವಿವಿಧ ಇಲಾಖೆ ಕಚೇರಿಗಳು ಇದೇ ಕಟ್ಟಡದಲ್ಲಿ ನಡೆಯುತ್ತಿವೆ. ಸಹಾಯಕ ಆಯುಕ್ತರ ಕಚೇರಿ ಬಲಭಾಗದ ಕೊಠಡಿ ಮೇಲ್ಛಾವಣಿ ಶಿಥಿಲಾವಸ್ಥೆಗೆ ತಲುಪಿ ಕುಸಿದು ಬಿದ್ದಿದೆ.

ಈ ಹಿಂದೆ ತಹಶೀಲ್ದಾರ್ ಕಚೇರಿಯಾಗಿ ಈ ಕಟ್ಟಡ ಬಳಕೆಯಾಗಿತ್ತು. ತಹಶೀಲ್ದಾರ್ ಕಚೇರಿ ಸ್ಥಳಾಂತರ ಬಳಿಕ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಕಾರಣ ಕುಸಿದು ಬಿದ್ದಿದೆ. ಹೈದ್ರಾಬಾದ್ ನಿಜಾಮರ ಕಾಲದಲ್ಲಿ ಲಿಂಗಸುಗೂರು ಜಿಲ್ಲಾ ಕೆಂದ್ರವಾಗಿತ್ತು. ಆಗ ಇದೇ ಕಟ್ಟಡ ಆಡಳಿತ ಕಚೇರಿಯಾಗಿ ಬಳಕೆಯಲ್ಲಿತ್ತು. ಸತತ ಮಳೆಗೆ ಮೇಲ್ಛಾವಣಿ ಮೇಲೆ ನೀರು ನಿಂತು ಕಟ್ಟಡ ಕುಸಿದಿದೆ.

ಸ್ಥಳಕ್ಕೆ ಸಹಾಯಕ ಆಯುಕ್ತರು, ತಹಶೀಲ್ದಾರ ಭೇಟಿ ನೀಡಿ, ಪರಿಶೀಲನೆ ಮಾಡಿದ್ದಾರೆ. ಪ್ರಾಚ್ಯ ವಸ್ತು ಇಲಾಖೆಗೆ ಮಾಹಿತಿ ನೀಡಿ, ದುರಸ್ತಿ ಕಾರ್ಯ ಮಾಡಲಾಗುವುದು ಅಂತ ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: