ನವದೆಹಲಿ: ಪುಟ್ಟ ಪುಟ್ಟ ಹೆಜ್ಜೆಯಿಟ್ಟು ನಡೆಯಲು ಪ್ರಯತ್ನಿಸುವ ವೇಳೆ ಬಿದ್ದ ಪರಿಣಾಮ ಮೆದುಳು ನಿಷ್ಕ್ರಿಯವಾಗಿ 16 ತಿಂಗಳ ಮಗು ಮೃತಪಟ್ಟಿರುವ ದಾರುಣ ಘಟನೆ ದೆಹಲಿಯಲ್ಲಿ ನಡೆದಿದೆ. ಅಂಗಾಂಗ ದಾನದೊಂದಿಗೆ ಮಗು ಸಾವಿನಲ್ಲೂ ಸಾರ್ಥಕತೆ ಮೆರೆದಿದೆ.
ಆಗಸ್ಟ್ 17ರಂದು ಬೆಳಗ್ಗೆ ಬಿದ್ದು ಮಗು ರಿಶಾಂತ್ ಗಂಭೀರವಾಗಿ ಗಾಯಗೊಂಡಿತ್ತು. ವೃತ್ತಿಯಲ್ಲಿ ಖಾಸಗಿ ಗುತ್ತಿಗೆದಾರರಾದ ಮಗುವಿನ ತಂದೆ ಉಪಿಂದರ್, ತಕ್ಷಣ ಮಗುವನ್ನು ಜಮುನಾ ಪಾರ್ಕ್‌ನಲ್ಲಿರುವ ತಮ್ಮ ನಿವಾಸದ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ದುರದೃಷ್ಟವಶಾತ್ ಮಗುವಿನ ಮೆದುಳು ನಿಷ್ಕ್ರಿಯವಾಗಿದೆ ಎಂದು ಏಮ್ಸ್ ವೈದ್ಯರು ದೃಢಪಡಿಸಿದರು. ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಕೂಲಿ ಕಾರ್ಮಿಕರು- ಮೃತಪಟ್ಟ 9 ಮಂದಿಯಲ್ಲಿ 6 ಜನರ ನೇತ್ರದಾನ

ಮಗುವಿನ ಅಂಗಾಂಗ ದಾನ ಮಾಡಿದರೆ ಅನೇಕರ ಬದುಕಿಗೆ ಬೆಳಕು ನೀಡಿದಂತಾಗುತ್ತದೆ ಎಂದು ಏಮ್ಸ್ ವೈದ್ಯರು ಮಗು ರಿಶಾಂತ್ ಪೋಷಕರಿಗೆ ಸಲಹೆ ನೀಡಿದರು. ಅಲ್ಲದೇ ಅಂಗಾಂಗ ದಾನದ ಬಗ್ಗೆ ಕೌನ್ಸೆಲಿಂಗ್ ಕೂಡ ನಡೆಸಿದರು. AIIMS ವೈದ್ಯರ ಸಲಹೆ ಮೇರೆಗೆ ಮಗುವಿನ ಪೋಷಕರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದರು.
ರಿಶಾಂತ್ ನಮ್ಮ ಕುಟುಂಬದ ಪ್ರೀತಿಯ ಮಗನಾಗಿದ್ದ. ಐವರು ಅಕ್ಕಂದಿರು ಅವನನ್ನು ತುಂಬಾ ಪ್ರೀತಿಸುತ್ತಿದ್ದರು. ದುರದೃಷ್ಟವಶಾತ್ ಅಂದು ನಾನು ಕೆಲಸಕ್ಕೆ ಹೊರಡುವ ಆತುರದಲ್ಲಿದ್ದೆ. ಈ ವೇಳೆ ಆತ ಬಿದ್ದು ಗಂಭೀರ ಗಾಯಗೊಂಡ. ಆತನನ್ನು ಹಿಡಿದುಕೊಳ್ಳಲು ನನ್ನಿಂದ ಸಾಧ್ಯವಾಗಲಿಲ್ಲ. ಮುದ್ದು ಕಂದ ಇನ್ನಿಲ್ಲವಾಗಿದ್ದಾನೆ. ಅವನ ಅಂಗಾಂಗಗಳು ಇತರರ ಜೀವ ಉಳಿಸುತ್ತೆ ಎನ್ನುವ ಉದ್ದೇಶದಿಂದ ದಾನ ಮಾಡಿದ್ದೇವೆ ಎಂದು ಉಪೀಂದರ್ ಭಾವುಕವಾಗಿ ನುಡಿದಿದ್ದಾರೆ. ಇದನ್ನೂ ಓದಿ: ಪ್ರಿಯಕರನಿಗೆ 15 ಬಾರಿ ಕರೆ ಮಾಡಿ ಟೆಕ್ಕಿ ಸುಂದರಿ ಆತ್ಮಹತ್ಯೆ

Leave a Reply