ಲಕ್ನೋ: 15 ವರ್ಷದ ಹುಡುಗಿಯನ್ನ 10 ಮಂದಿ ಕಾಮುಕರು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಬುಲಂದ್ ಶಹರ್ನ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ಚಚೇರಿ ಗ್ರಾಮದಲ್ಲಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಐಪಿಸಿ ಸೆಕ್ಷನ್ 363 ಮತ್ತು 376 ರ ಅಡಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಇಬ್ಬರನ್ನು ನಿತೀಶ್(18) ಮತ್ತು ಆತನ ಸಹೋದರ ರೋಹಿತ್ ಎಂದು ಗುರುತಿಸಲಾಗಿದೆ. ಜೊತೆಗೆ ಈ ಕುರಿತು ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಜಹಾಂಗೀರಾಬಾದ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಸುಭಾಷ್ ಸಿಂಗ್ ಹೇಳಿದ್ದಾರೆ.
ಏನಿದು ಪ್ರಕರಣ?
ಸಂತ್ರಸ್ತೆ ತನ್ನ ಕುಟುಂಬದವರ ಜೊತೆ ಸೋದರಸಂಬಂಧಿ ನಿಶ್ಚಿತಾರ್ಥ ಸಮಾರಂಭದಲ್ಲಿ ಪಾಲ್ಗೊಳ್ಳಲು ಚಚೇರಿ ಗ್ರಾಮಕ್ಕೆ ಹೋಗಿದ್ದಳು. ಅಲ್ಲಿ ಆರೋಪಿಗಳಾದ ನಿತೀಶ್ ಮತ್ತು ಸಹೋದರ ರೋಹಿತ್ ಕಾರ್ಯಕ್ರಮದಲ್ಲಿ ಕೆಲಸ ಮಾಡಲು ಬಂದಿದ್ದರು. ಬಳಿಕ ನಿತೀಶ್ ಸುಮಾರು 8 ಗಂಟೆಗೆ ನೆರೆಯ ಗ್ರಾಮದ ದೇವಾಲಯಕ್ಕೆ ತನ್ನೊಂದಿಗೆ ಬರಬೇಕೆಂದು ಸಂತ್ರಸ್ತೆಯ ಬಳಿ ಕೇಳಿಕೊಂಡಿದ್ದಾನೆ.

ಸಂತ್ರಸ್ತೆ ಒಪ್ಪಿಕೊಂಡು ಅವರ ಜೊತೆ ಹೋಗಿದ್ದಾಳೆ. ಆದರೆ ಇವರು ಗ್ರಾಮಕ್ಕೆ ಹೋಗುವಷ್ಟರಲ್ಲಿ ಯುವಕರ ಗುಂಪೊಂದು ಕಾಯುತ್ತಿದ್ದು, ಬಳಿಕ 10 ಮಂದಿ ಕಾಮುಕರು ಆಕೆ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ.
ಇತ್ತ ಕುಟುಂಬದವರು ಮಗಳು ಕಾಣಿಸುತ್ತಿಲ್ಲ ಎಂದು ಹುಡುಕಾಡಿದ್ದಾರೆ. ಮರುದಿನ ಬೆಳಗ್ಗೆ 5 ಗಂಟೆಗೆ ಸಂತ್ರಸ್ತೆ ಪ್ರದೇಶವೊಂದರಲ್ಲಿ ಪ್ರಜ್ಞಾಹೀನಾ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಬಳಿಕ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶುಕ್ರವಾರ ಸಂತ್ರಸ್ತೆಯ ಸಹೋದರ ಹತ್ತು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಷ್ಟೇ ಅಲ್ಲದೇ ಸಂತ್ರಸ್ತೆ ಘಟನೆಯ ವಿಡಿಯೋ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಲು ಪೊಲೀಸ್ ತಂಡಗಳು ಕೆಲಸ ಮಾಡುತ್ತಿವೆ ಎಂದು ಎಸ್‍ಪಿ ರಾಯ್ಸ್ ಅಖ್ತರ್ ತಿಳಿಸಿದ್ದಾರೆ.

Leave a Reply