ತನ್ನ 15 ತಿಂಗ್ಳ ಮಗುವಿನ ಸಾವಿನ ಸುದ್ದಿ ತಿಳಿದ್ರೂ ಚಿಕಿತ್ಸೆ ಮುಂದುರಿಸಿದ ವೈದ್ಯ

– ಅನಾರೋಗ್ಯದ ಮಗುವನ್ನ ಬಿಟ್ಟು ಕರ್ತವ್ಯಕ್ಕೆ ಡಾಕ್ಟರ್ ಹಾಜರ್

ಭೋಪಾಲ್: ಕೊರೊನಾ ವಿರುದ್ಧದ ಹೋರಾಟದಲ್ಲಿ ವೈದ್ಯರು ಹಗಲಿರುಳು ಎನ್ನದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ತಮ್ಮ ಕುಟುಂಬಕ್ಕಿಂತ ಕರ್ತವ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಆದರೆ ಇಲ್ಲೊಬ್ಬ ವೈದ್ಯರು ತಮ್ಮ ಮಗಳ ಸಾವಿನ ಸುದ್ದಿ ತಿಳಿದರೂ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಮುಂದುವರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಮಧ್ಯಪ್ರದೇಶದ ಹೋಶಂಗಾಬಾದ್ ಜಿಲ್ಲೆಯಲ್ಲಿ ಮನಕಲುಕುವಂತ ಘಟನೆ ನಡೆದಿದೆ. ಹೋಶಂಗಾಬಾದ್ ನಿವಾಸಿ ಡಾಕ್ಟರ್ ದೇವೇಂದ್ರ ಮೆಹ್ರಾ ತನ್ನ 15 ತಿಂಗಳ ಅನಾರೋಗ್ಯದ ಮಗಳನ್ನು ಬಿಟ್ಟು ಇಂದೋರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮೆಹ್ರಾ ಅವರ ಮಗುವಿನ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿತ್ತು. ಈ ಮಧ್ಯೆ ಅವರು ತಮ್ಮ ಅನಾರೋಗ್ಯದ ಮಗಳನ್ನು ಒಬ್ಬ ತಂದೆ ಹಾಗೂ ವೈದ್ಯರಾಗಿ ನೋಡಿಕೊಳ್ಳುತ್ತಿದ್ದರು. ಆದರೆ ಡಾಕ್ಟರ್ ಮೆಹ್ರಾ ಅವರನ್ನು ಇಂದೋರ್‌ನಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ನೇಮಿಸಲಾಗಿತ್ತು. ಹೋಶಂಗಾಬಾದ್‍ದಿಂದ ಇಂದೋರ್‌ಗೆ 200 ಕಿಲೋ ಮೀಟರ್‌ಗಿಂತ ದೂರವಿದೆ. ಮಗಳ ಸ್ಥಿತಿ ನೋಡಿ ಮೆಹ್ರಾ ಅವರಿಗೆ ಹೋಗಲು ಮನಸ್ಸಿರಲಿಲ್ಲ. ಆದರೂ ಅನಿವಾರ್ಯ ಕಾರಣದಿಂದ ಇಂದೋರ್‌ಗೆ ಹೋಗಿದ್ದರು.

ಕೊನೆಗೆ ಡಾ.ದೇವೇಂದ್ರ ಮೆಹ್ರಾ ಅವರು ಮಗಳನ್ನು ಬಿಟ್ಟು ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಸ್ವಲ್ಪ ದಿನದಲ್ಲೇ ಮಗಳ ಸಾವಿನ ಸುದ್ದಿ ಬಂದಿದೆ. ಆದರೂ ಮೆಹ್ರಾ ಅವರು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಮುಂದುವರಿಸಿದ್ದರು. ನಂತರ ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಅಧಿಕಾರಿಗಳು ಮೆಹ್ರಾ ಅವರಿಗೆ ಇಂದೋರ್‌ನಿಂದ ಹೋಶಂಗಾಬಾದ್‍ಗೆ ತೆರಳಲು ಅನುಮತಿ ನೀಡಿದರು.

ಬುಧವಾರ ಡಾ.ದೇವೇಂದ್ರ ಮೆಹ್ರಾ ಹೋಶಂಗಾಬಾದ್‍ದ ತಮ್ಮ ಮನೆಗೆ ಹೋಗಿದ್ದಾರೆ. ಈ ವೇಳೆ ಮಾತನಾಡಿದ ಮೆಹ್ರಾ ಅವರು, ನನ್ನ ಮಗಳ ಸ್ಥಿತಿಯನ್ನು ನೋಡಿದ ಮೇಲೆ ನನಗೆ ಹಿಂತಿರುಗಬೇಕೆಂದು ಅನಿಸಿರಲಿಲ್ಲ. ಈ ವೇಳೆ ಕರ್ತವ್ಯವೂ ಮುಖ್ಯವಾಗಿತ್ತು. ರೋಗಿಗಳಿಗೆ ನನ್ನ ಅವಶ್ಯಕತೆ ಇತ್ತು.  ಆದರೆ ನನ್ನ ಮಗಳು ಮೃತಪಟ್ಟ ನಂತರ ಅಧಿಕಾರಿಗಳೇ ಮನೆಗೆ ಕಳುಹಿಸಿದ್ದಾರೆ ಎಂದು ನೋವಿನಿಂದ ಹೇಳಿದರು.

ಡಾ.ದೇವೇಂದ್ರ ಮೆಹ್ರಾ ಅವರಂತೆ ಅನೇಕ ವೈದ್ಯರು, ಪೊಲೀಸರು ತಮ್ಮ ತಮ್ಮ ಕುಟುಂಬದಿಂದ ದೂರು ಉಳಿದುಕೊಂಡು ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *