15 ಲಕ್ಷಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ಮಾರಾಟ! – ವಿಡಿಯೋ ನೋಡಿ

ತುಮಕೂರು: ತಿಂಗಳಿಗೆ ಲಕ್ಷ ಲಕ್ಷ ಹಣ ವರಮಾನ ಬರೋ ತುಮಕೂರು ಜಿಲ್ಲೆಯ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ 15 ಲಕ್ಷ ರೂ.ಗೆ ಮಾರಾಟವಾಗಿದೆ ಎನ್ನುವ ಮಾತು ಕೇಳಿ ಬಂದಿದೆ.

ಗುಬ್ಬಿ ತಾಲೂಕಿನ ಕಲ್ಲೂರು ಗ್ರಾಮಪಂಚಾಯತ್ ನಲ್ಲಿ ಈ ಡೀಲ್ ಹಗರಣ ನಡೆದಿದ್ದು, ಗ್ರಾಮ ಪಂಚಾಯತ್ ಅಧ್ಯಕ್ಷನನ್ನು ಕೆಳಗಿಳಿಸಲು ಸುಮಾರು 15 ಲಕ್ಷ ರೂ. ಹಣ ಡೀಲ್ ಆಗಿರೋ ಆರೋಪ ಕೇಳಿ ಬಂದಿದೆ. ಡೀಲ್ ಕುದುರಿಸುತಿದ್ದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

ಹಾಲಿ ಅಧ್ಯಕ್ಷ ಜಾವೀದ್ ಪಾಷಾರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಈ ಡೀಲ್ ನಡೆದಿದೆ ಎನ್ನಲಾಗಿದೆ. ಬಾಕಿ ಉಳಿದ 22 ತಿಂಗಳ ಅವಧಿಗೆ ತಲಾ 11 ತಿಂಗಳು ಸದಸ್ಯರಾದ ಗಿರೀಶ್ ಹಾಗೂ ಶಿವಾನಂದ ಅಧ್ಯಕ್ಷರಾಗಲು ಬಯಸಿದ್ದಾರೆ. ಮೊದಲ ಅವಧಿಗೆ ಅಧ್ಯಕ್ಷರಾಗಲು ಬಯಸಿದ್ದ ಗಿರೀಶ್ 15 ಲಕ್ಷ ರೂಪಾಯಿಯನ್ನು ಭದ್ರತೆ ಠೇವಣಿ ರೂಪದಲ್ಲಿ ಇನ್ನೊಬ್ಬ ಸದಸ್ಯ ಶಿವಾನಂದಗೆ ಕೊಟ್ಟಿದ್ದಾರೆ. 11 ತಿಂಗಳು ಅವಧಿ ಮುಗಿದ ಬಳಿಕ ಗಿರೀಶ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಶಿವಾನಂದನಿಗೆ ಬಿಟ್ಟುಕೊಡದೇ ಇದ್ದರೆ ಶಿವಾನಂದ ಪಡೆದ 15 ಲಕ್ಷ ರೂ. ಮರಳಿ ಕೊಡುವಂತಿಲ್ಲ ಎಂಬ ಒಪ್ಪಂದ ಮಾಡಿಕೊಂಡಿದ್ದಾರೆ.

ಗ್ರಾಮ ದೇವತೆಯ ಮುಂದೆ ಆಣೆ ಪ್ರಮಾಣ ಮಾಡಿ ಈ ವ್ಯವಹಾರ ನಡೆಸಲಾಗಿದೆ. ಅಧ್ಯಕ್ಷ ಹುದ್ದೆಯ ಆಕಾಂಕ್ಷಿ ಗಿರೀಶರಿಂದ ಎರಡನೇ ಅವಧಿಯ ಆಕಾಂಕ್ಷಿ ಶಿವಾನಂದ್ ಕೈ ಚೀಲದಲ್ಲಿ 15 ಲಕ್ಷರೂ ಪಡೆದಿದ್ದಾರೆ. ಅಷ್ಟಕ್ಕೂ ಕಲ್ಲೂರು ಗ್ರಾಮ ಪಂಚಾಯತಿಯಲ್ಲಿ ಸದಸ್ಯರಾದ ಶಿವಾನಂದ ಮತ್ತು ಗಿರೀಶ್ ಪ್ರಭಾವಿಯಾಗಿದ್ದು, ಒಟ್ಟು 14 ಸದಸ್ಯರ ಪೈಕಿ 10 ಸದಸ್ಯರು ಇವರ ಹಿಡಿತದಲ್ಲಿ ಇದ್ದಾರೆ ಎನ್ನಲಾಗಿದೆ. ಹಾಗಾಗಿ ಹಾಲಿ ಸದಸ್ಯ ಜಾವೀದ್ ಪಾಷಾರ ವಿರುದ್ಧ ಅವಿಶ್ವಾಸ ಮಂಡನೆ ಮಾಡಲು ಈ ಡೀಲ್ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ.

ಈ ಪ್ರಕರಣಕ್ಕೆ ಸಮಜಾಯಿಸಿ ನೀಡಿದ ಆರೋಪ ಹೊತ್ತ ಸದಸ್ಯರು, ಅದು ದೇವರ ಹುಂಡಿ ಒಡೆದ ಹಣ, ಯಾವುದೇ ಡೀಲ್ ಮಾಡಿದ ಹಣ ಅಲ್ಲ ಎಂದು ಹೇಳಿದ್ದಾರೆ.

https://www.youtube.com/watch?v=rj0-W3dIo3M

Comments

Leave a Reply

Your email address will not be published. Required fields are marked *