15 ಕೋಟಿ ರೂ. ಮೌಲ್ಯದ ಮೊಬೈಲ್‍ಗಳಿದ್ದ ಕಂಟೈನರ್ ಹೈಜಾಕ್

– ಡ್ರೈವರ್, ಕ್ಲೀನರ್‍ನನ್ನು ಕಟ್ಟಿ ಹಾಕಿ ದರೋಡೆ
– ಸಿನಿಮಾ ಶೈಲಿಯಲ್ಲಿ ಕೃತ್ಯ

ಚೆನ್ನೈ: 15 ಕೋಟಿ ರೂ. ಮೊಬೈಲ್ ಗಳನ್ನು ಹೊತ್ತು ಸಾಗುತ್ತಿದ್ದ ಟ್ರಕ್‍ಅನ್ನು 10 ಮಂದಿ ಇದ್ದ ದರೋಡೆಕೋರರ ಗುಂಪು ಹೈಜಾಕ್ ಮಾಡಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ ಸಮೀಪ ನಡೆದಿದೆ.

ಸುಮಾರು 14 ಸಾವಿರ ಮೊಬೈಲ್ ಗಳು ಕಂಟೈನರ್ ನಲ್ಲಿತ್ತು ಎಂಬ ಮಾಹಿತಿ ಲಭಿಸಿದ್ದು, ಇವುಗಳ ಒಟ್ಟು ಮೌಲ್ಯ 15 ಕೋಟಿ ರೂ. ಆಗಲಿದೆ ಎನ್ನಲಾಗಿದೆ. ಘಟನೆ ಮಾಹಿತಿ ನೀಡಿರುವ ಹೊಸೂರು ಡಿಎಸ್‍ಪಿ ಮುರಳಿ ಅವರು, ಚೆನ್ನೈನ ಪೂನಮಲ್ಲಿ ಮೊಬೈಲ್ ಘಟಕದಿಂದ 14,400 ರೆಡ್ಮಿ ಮೊಬೈಲ್‍ಗಳನ್ನು 1,440 ಬಾಕ್ಸ್ ಗಳಲ್ಲಿ ಪ್ಯಾಕ್ ಮಾಡಿ ಸಾಗಣೆ ಮಾಡಲಾಗುತ್ತಿತ್ತು ಎಂದು ತಿಳಿಸಿದ್ದಾರೆ.

ಡ್ರೈವರ್ ಸತೀಶ್ ಕುಮಾರ್, ಕ್ಲೀನರ್ ಅರುಣ್ ಮೊಬೈಲ್ ಘಟಕದಿಂದ ಲೋಡ್‍ನೊಂದಿಗೆ ಮಂಗಳವಾರ 3 ಗಂಟೆ ಸುಮಾರಿಗೆ ಮುಂಬೈಗೆ ಪ್ರಯಾಣ ಆರಂಭಿಸಿದ್ದರು. ವೆಲ್ಲೂರು ಬಳಿ ರಾತ್ರಿ ಊಟ ಮಾಡಿ ಮತ್ತೆ ಪ್ರಯಾಣ ಮುಂದುವರಿಸಿದ್ದರು. ಮೆಲುಮಲೈ ಸಮೀಪ ಮತ್ತೊಂದು ಟ್ರಕ್ ಮೊಬೈಲ್‍ಗಳಿದ್ದ ಟ್ರಕ್‍ಅನ್ನು ಫಾಲೋ ಮಾಡಲು ಆರಂಭಿಸಿತ್ತು. ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯ ಕೃಷ್ಣಗಿರಿಯ ಸಮೀಪ ಟ್ರಕ್ ಮೂಲಕ ಅಡ್ಡಗಡ್ಡಿ ವಾಹನವನ್ನು ನಿಲ್ಲಿಸಿದ್ದರು.

ಮೊದಲು ಟ್ರಕ್ ನಲ್ಲಿದ್ದ 6 ಜನ ಡ್ರೈವರ್, ಕ್ಲೀನರ್ ಮೇಲೆ ಹಲ್ಲೆ ನಡೆಸಿ ಹಗ್ಗದಿಂದ ಕಟ್ಟಿ ಹಾಕಿದ್ದರು. ಮತ್ತೊಂದು ವಾಹನದಲ್ಲಿ ಬಂದ ನಾಲ್ವರು ಅವರನ್ನು ಕಾರಿನಲ್ಲಿ ಹತ್ತಿಸಿಕೊಂಡು ಸ್ವಲ್ಪ ದೂರ ಮುಂದೇ ಸಾಗಿ ಬಳಿಕ ರಸ್ತೆ ಪಕ್ಕದ ಪೊದೆಯಲ್ಲಿ ಬೀಸಾಡಿ ತೆರಳಿದ್ದರು. ಆರೋಪಿಗಳೆಲ್ಲಾ ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ತಿಳಿಸಿದ್ದಾರೆ.

ಡ್ರೈವರ್ ಹಾಗೂ ಕ್ಲೀನರ್ ಹಗ್ಗದಿಂದ ತಮ್ಮನ್ನು ಬಿಡಿಸಿಕೊಂಡು ಅಂಬುಲೆನ್ಸ್ ಒಂದರ ಸಹಾಯದಿಂದ ಸ್ಥಳೀಯ ಕೃಷ್ಣಗಿರಿ ಆಸ್ಪತ್ರೆಗೆ ದಾಖಲಾಗಿದ್ದು, ಆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನಾ ಸ್ಥಳದಿಂದ ದರೋಡೆಕೋರರು ಹೈಜಾಕ್ ಮಾಡಿದ್ದ ಟ್ರಕ್ ಪತ್ತೆಯಾಗಿದ್ದು, ಮತ್ತೊಂದು ಟ್ರಕ್ ಮೂಲಕ ಕಳ್ಳರು ಸರಕಿನೊಂದಿಗೆ ಎಸ್ಕೇಪ್ ಆಗಿದ್ದಾರೆ. ಸದ್ಯ ಘಟನೆ ಸಂಬಂಧ ದೂರು ದಾಖಲಿಸಿಕೊಂಡಿರುವ ಸೇಲಂ ಪೊಲೀಸರು 17 ತಂಡಗಳೊಂದಿಗೆ ದರೋಡೆಕೋರರ ಹುಡುಕಾಟದಲ್ಲಿ ನಿರಾತರಾಗಿದ್ದಾರೆ.

Comments

Leave a Reply

Your email address will not be published. Required fields are marked *