ಹೋಳಿ ಹಬ್ಬದಂದು ಉಜ್ಜಯಿನಿಯ ಮಹಾಕಾಳೇಶ್ವರ ದೇಗುಲದಲ್ಲಿ ಭಾರೀ ಅಗ್ನಿ ದುರಂತ – 14 ಅರ್ಚಕರಿಗೆ ಗಾಯ

– ಗಯಾಳುಗಳು ಶೀಘ್ರ ಗುಣಮುಖರಾಗಲಿ: ಪ್ರಾರ್ಥಿಸಿದ ಅಮಿತ್‌ ಶಾ

ಚಂಡೀಗಢ: ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ (Mahakaleswar Temple) ಸೋಮವಾರ ಬೆಂಕಿ ಅವಘಡ ಸಂಭವಿಸಿದ್ದು, ಕನಿಷ್ಠ 14 ಅರ್ಚಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೋಳಿ ಹಬ್ಬದ ಪ್ರಯುಕ್ತ ದೇವಾಲಯದ ಗರ್ಭಗುಡಿಯಲ್ಲಿ ಭಸ್ಮ ಆರತಿ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಹೋಳಿ ಆಚರಿಸಲು ಗುಲಾಲ್ ಎಸೆಯಲಾಗುತ್ತಿತ್ತು. ಈ ವೇಳೆ ಕೆಲ ಗುಲಾಲ್‌, ಕರ್ಪೂರವನ್ನು ಹೊಂದಿದ್ದ ಪೂಜೆಯ ತಾಲಿಯ ಮೇಲೆ ಬಿದ್ದವು. ಕರ್ಪೂರ ನೆಲದ ಮೇಲೆ ಬಿದ್ದು ಬೆಂಕಿ ವ್ಯಾಪಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆ ದೃಶ್ಯ ದೇವಸ್ಥಾನದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾರ ಪತ್ನಿಗೆ ಸೇರಿದ್ದ ದುಬಾರಿ ಕಾರು ಕಳ್ಳತನ!

14 ಪುರೋಹಿತರಿಗೆ ಸುಟ್ಟ ಗಾಯಗಳಾಗಿವೆ. ಕೆಲವರು ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಂಟು ಮಂದಿ ಇಂದೋರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ. ಜಿಲ್ಲಾ ಪಂಚಾಯತ್ ಸಿಇಒ ಮೃಣಾಲ್ ಮೀನಾ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ಅನುಕೂಲ್ ಜೈನ್ ಅವರು ತನಿಖೆ ನಡೆಸಿ ವರದಿ ನೀಡುತ್ತಾರೆ. ಮೂರು ದಿನಗಳಲ್ಲಿ ಸಲ್ಲಿಸಲಾಗುವುದು ಎಂದು ತಿಳಿದುಬಂದಿದೆ.

ಕೆಲವು ವಿವಿಐಪಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಜನರು ದೇವಾಲಯದಲ್ಲಿ ಉಪಸ್ಥಿತರಿದ್ದರು. ಆದರೆ ಯಾವುದೇ ಭಕ್ತರು ಗಾಯಗೊಂಡಿಲ್ಲ. ದೇವಾಲಯದ ಸಿಬ್ಬಂದಿ ಮತ್ತು ಸಂಜಯ್ ಗುರುಗಳ ಮುಖ್ಯ ಅರ್ಚಕ ಸೇರಿದಂತೆ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ವಾಣಿಜ್ಯೋದ್ಯಮಿ ಪಲ್ಲವಿ ಡೆಂಪೊಗೆ ಟಿಕೆಟ್‌ – ಗೋವಾ ಇತಿಹಾಸದಲ್ಲೇ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಮೊದಲ ಮಹಿಳೆ

ಘಟನೆ ದುರದೃಷ್ಟಕರ. ಆದರೆ ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕೆಲವು ಅರ್ಚಕರು ಗಾಯಗೊಂಡಿದ್ದಾರೆ. ಅವರನ್ನು ಇಂದೋರ್ ಮತ್ತು ಉಜ್ಜಯಿನಿಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ನಾನು ಅಲ್ಲಿಗೆ ಹೋಗುತ್ತಿದ್ದೇನೆ. ನಾನು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದೇನೆ. ಇಂಥ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಮೋಹನ್ ಯಾದವ್ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದಾರೆ.

ಘಟನೆ ಸಂಬಂಧ ವಿಷಾದ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಸ್ಥಳೀಯ ಆಡಳಿತವು ಗಾಯಾಳುಗಳಿಗೆ ನೆರವು ಮತ್ತು ಚಿಕಿತ್ಸೆ ನೀಡುತ್ತಿದೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲು ಬಾಬಾ ಮಹಾಕಾಳನಲ್ಲಿ ಪ್ರಾರ್ಥಿಸುತ್ತೇನೆ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: ಕೈತಪ್ಪಿದ ಟಿಕೆಟ್ – ಕೀಟನಾಶಕ ಸೇವಿಸಿ ತಮಿಳುನಾಡಿನ ಸಂಸದ ಆತ್ಮಹತ್ಯೆಗೆ ಯತ್ನ