14.55 ಟನ್ ಕಬ್ಬು ಹೊತ್ತ ಗಾಡಿಯನ್ನು ಎಳೆದ ಜೋಡೆತ್ತುಗಳು

– ಜೋಡೆತ್ತುಗಳ ಬಲಕ್ಕೆ ನೆಟ್ಟಿಗರು ಫಿದಾ

ಮಂಡ್ಯ: ಸಕ್ಕರೆ ನಾಡು ಮಂಡ್ಯ ಕಬ್ಬಿಗೆ ಪ್ರಸಿದ್ಧ. ಆದರೆ ಎತ್ತಿನಗಾಡಿಯಲ್ಲಿ 5 ರಿಂದ 8 ಟನ್ ಕಬ್ಬನ್ನು ಮಾತ್ರ ಸಾಗಿಸುತ್ತಾರೆ. ಮಂಡ್ಯ ತಾಲೂಕಿನ ಹೆಚ್.ಮಲ್ಲಿಗೆರೆ ಗ್ರಾಮದ ವಿನಾಯಕ ಗೆಳೆಯ ಬಳಗದ ಯುವಕರು ಎತ್ತಿನಗಾಡಿಗೆ 14.55 ಟನ್ ಕಬ್ಬು ತುಂಬಿದ್ದಾರೆ. ಮಾತ್ರವಲ್ಲ ಈ ಕಬ್ಬಿನ ಗಾಡಿಯನ್ನು ಜೋಡೆತ್ತುಗಳು ನಿರಾಯಾಸವಾಗಿ ಎಳೆದು ನೋಡುಗರನ್ನು ನಿಬ್ಬೆರಗು ಮಾಡಿವೆ.

ಜಿಲ್ಲೆಯಲ್ಲಿ ಇಲ್ಲಿವರೆಗೆ ಒಂದು ಗಾಡಿಗೆ 12 ಟನ್ ತುಂಬುಲಾಗಿತ್ತು. ಆದರೆ ಮಲ್ಲಿಗೆರೆಯ ಯುವಕರ ತಂಡ 14.55 ಟನ್ ಕಬ್ಬು ತುಂಬಿ ಹಳೆಯ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಇಷ್ಟು ಟನ್ ಕಬ್ಬು ತುಂಬಿದ ಎತ್ತಿನ ಗಾಡಿಯನ್ನು ಹುರುಗಲವಾಡಿ ಗ್ರಾಮದ ಶರತ್ ಅವರ ಜೋಡೆತ್ತುಗಳು ಮೂರು ಕಿಲೋಮೀಟರ್ ಎಳೆದು ಸೈ ಎನಿಸಿಕೊಂಡಿವೆ. ಈ ಜೋಡೆತ್ತುಗಳನ್ನು ಶರತ್ ಅವರು ಕಳೆದ ತಿಂಗಳಷ್ಟೇ 2.90 ಲಕ್ಷ ರೂ.ಗೆ ಖರೀದಿ ಮಾಡಿದ್ದಾರು.

ಶನಿವಾರ 14.55 ಟನ್ ಕಬ್ಬಿನ ಗಾಡಿಯನ್ನು ಈ ಜೋಡೆತ್ತುಗಳು ಎಳೆಯುವಾಗ ಜನರು ಶಿಳ್ಳೆ ಚಪ್ಪಾಳೆ ಹೊಡೆಯುವ ಮೂಲಕ ಪ್ರೋತ್ಸಾಹ ನೀಡಿದ್ದಾರೆ. ಇಷ್ಟು ಬಲಶಾಲಿ ಎತ್ತುಗಳು ಇವೆಯಾ ಎಂದು ಎಲ್ಲರೂ ಬಾಯಿ ಮೇಲೆ ಬೆರಳು ಇಟ್ಟುಕೊಂಡಿದ್ದಾರೆ. ಈ ಜೋಡೆತ್ತುಗಳು ಎತ್ತಿನಗಾಡಿ ಎಳೆಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Comments

Leave a Reply

Your email address will not be published. Required fields are marked *