ಚರಂಡಿ ಸ್ವಚ್ಛಗೊಳಿಸಲು ಖುದ್ದು ತಾನೇ ಚರಂಡಿಗೆ ಇಳಿದ 13ರ ಬಾಲಕಿ

ಚಿಕ್ಕಬಳ್ಳಾಪುರ: ಗ್ರಾಮ ಪಂಚಾಯ್ತಿ ವತಿಯಿಂದ ದಲಿತ ಕಾಲೋನಿಯಲ್ಲಿ ಚರಂಡಿ ಸ್ವಚ್ಛಗೊಳಿಸದ ಹಿನ್ನೆಲೆಯಲ್ಲಿ, 13 ವರ್ಷದ ದಲಿತ ಬಾಲಕಿಯೊಬ್ಬಳು ಖುದ್ದು ತಾನೇ ಚರಂಡಿಗಿಳಿದು ಸ್ವಚ್ಛಗೊಳಿಸಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ದಲಿತ ಕಾಲೋನಿಯ 7ನೇ ತರಗತಿ ವ್ಯಾಸಂಗ ಮಾಡುತ್ತಿರುವ 13 ವರ್ಷದ ರಂಜಿತಾ ಚರಂಡಿ ಸ್ವಚ್ಛಗೊಳಿಸಿದ ಬಾಲಕಿ. ಗ್ರಾಮ ಪಂಚಾಯ್ತಿ ವತಿಯಿಂದ ದಲಿತ ಕಾಲೋನಿಯಲ್ಲಿ ಚರಂಡಿಗಳನ್ನ ಸ್ವಚ್ಛಗೊಳಿಸದೆ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ದಲಿತ ಕಾಲೋನಿ ನಿವಾಸಿಗಳು ಆರೋಪಿಸಿದ್ದಾರೆ.

ಇನ್ನೂ ದಲಿತ ಕಾಲೋನಿಯಲ್ಲಿ ಚರಂಡಿಗಳ ಸ್ವಚ್ಛತೆ ಮಾಡದ ಹಿನ್ನೆಲೆಯಲ್ಲಿ ಸರಿಸುಮಾರು 140ಕ್ಕೂ ಹೆಚ್ಚು ಮನೆಗಳುಳ್ಳ ಕಾಲೋನಿಯಲ್ಲಿ ಹಲವು ಮಂದಿ ಚಿಕನ್ ಗುನ್ಯಾ, ಮಲೇರಿಯಾ, ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಆಸ್ಪತ್ರೆಗಳಿಗೆ ಅಲೆಯುವಂತಾಗಿದೆ. ಇದನ್ನು ಗಮನಿಸಿದ ರಂಜಿತಾ ತನ್ನ ಮನೆ ಮುಂದೆ ತಾನೇ ಚರಂಡಿ ಸ್ವಚ್ಛಗೊಳಿಸಿಕೊಳ್ಳಲು ಮುಂದಾಗಿದ್ದಾಳೆ.

ರಂಜಿತಾ ಚರಂಡಿ ಸ್ವಚ್ಛಗೊಳಿಸಲು ಮುಂದಾಗಿದ್ದು ಇತರರಿಗೂ ಮಾದರಿಯಾಗಿ, ಇದನ್ನ ಕಂಡ ಇತರೆ ದಲಿತ ಕಾಲೋನಿ ನಿವಾಸಿಗಳು ತಮ್ಮ ತಮ್ಮ ಮನೆಗಳ ಮುಂದಿನ ಚರಂಡಿ ತಾವೇ ಸ್ವಚ್ಛ ಮಾಡಿಕೊಳ್ಳೋಕೆ ಮುಂದಾಗಿದ್ದಾರೆ.

ಆದರೆ ಗ್ರಾಮ ಪಂಚಾಯ್ತಿ ಆಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ದಲಿತ ಕಾಲೋನಿ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು, ವರದಿ ಮಾಡಲು ಹೋದ ಮಾಧ್ಯಮದವರ ಮೇಲೂ ಕೆಲ ಗ್ರಾಮಸ್ಥರನ್ನ ಎತ್ತಿ ಕಟ್ಟಿ ಗಲಾಟೆ ಮಾಡಿಸೋಕೆ ಮುಂದಾಗಿದ್ದಾರೆ.

Comments

Leave a Reply

Your email address will not be published. Required fields are marked *