– ಸಾವು ನೋವು, ಕಣ್ಣೀರಿನ ನಡುವೆ ಸಪ್ತಪದಿ ತುಳಿದ ವಧು-ವರ
ಮಂಡ್ಯ: ಕ್ಯಾಂಟರ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮದುವೆಗೆಂದು ಹೊರಟಿದ್ದ 13 ಜನ ಮೃತಪಟ್ಟು 25 ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಹೃದಯ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಮಾಚಹಳ್ಳಿ ಬಳಿ ನಡೆದಿದೆ.

ಜಯಮ್ಮ, ಪಾರ್ವತಿ, ಬೀರಮ್ಮ, ಸಣ್ಣಮ್ಮ, ಮಾದಮ್ಮ, ಶಿವಣ್ಣ, ರೇಣುಕಮ್ಮ, ಸೋನ, ಮೀನಾಕ್ಷಿ, ಕಾಳಮ್ಮ, ಕಮಲಮ್ಮ, ಪೂಜಾ ಹಾಗೂ ಕರಿಯಪ್ಪ ಮೃತ ದುರ್ದೈವಿಗಳು. ಮದ್ದೂರು ತಾಲೂಕಿನ ಅವಸರದಹಳ್ಳಿ ಗ್ರಾಮದಿಂದ, ಮದ್ದೂರು ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆಗೆಂದು ಸುಮಾರು ಐವತ್ತು ಜನ ಕ್ಯಾಂಟರ್‍ನಲ್ಲಿ ತೆರಳುತ್ತಿದ್ರು. ಈ ವೇಳೆ ಮಾಚಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕ್ಯಾಂಟರ್ ರಭಸವಾಗಿ ರಸ್ತೆ ಬದಿಯಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ.

ಚಾಲಕ ಕುಡಿದು ವಾಹನ ಚಲಾಯಿಸುತ್ತಿದ್ದ ಕಾರಣ ಅಪಘಾತ ಸಂಭವಿಸಿರಬಹುದೆಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಭೀಕರ ಅಪಘಾತದಿಂದಾಗಿ ಮದುವೆ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಆಸ್ಪತ್ರೆಯಲ್ಲಿ ಗಾಯಾಳುಗಳು ಕೈ, ಕಾಲು ಮುರಿದುಕೊಂಡು, ರಕ್ತ ಸುರಿಸುತ್ತ ನರಳುತ್ತಿರುವ ದೃಶ್ಯ ಕರುಳು ಹಿಂಡುವಂತಿದೆ. ತಮ್ಮವರನ್ನು ಕಳೆದುಕೊಂಡ ದುಃಖದಲ್ಲಿ ಆಸ್ಪತ್ರೆ ಬಳಿ ಬಂದಿರುವ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.

ಈ ನಡುವೆ ಇಂದು ಅದ್ದೂರಿಯಾಗಿ ನಡೆಯಬೇಕಿದ್ದ ಮದುವೆಯನ್ನೇ ತರಾತುರಿಯಲ್ಲಿ ಭಾನುವಾರ ರಾತ್ರಿಯೇ ನೆರವೇರಿಸಲಾಗಿದೆ. ಸಾವು ನೋವು ಕಣ್ಣೀರಿನ ನಡುವೆ ವಧುವರರು ಸಪ್ತಪದಿ ತುಳಿದಿದ್ದಾರೆ.
















Leave a Reply