13ರಲ್ಲಿದ್ದಾಗ ಮಗನಿಗೆ ಗೃಹಬಂಧನ – 41 ವರ್ಷವಾದ್ರೂ ಹೊರಗೆ ಬಿಡ್ಲಿಲ್ಲ ಕ್ರೂರಿ ತಾಯಿ

– 28 ವರ್ಷಗಳ ಕಾಲ ಮಗನ್ನು ರೂಮ್‍ನಲ್ಲಿ ಕೂಡಿ ಹಾಕಿದ್ಲು
– ಸಂಬಂಧಿಕರಿಂದ ಪ್ರಕರಣ ಬೆಳಕಿಗೆ

ಸ್ಟಾಕ್ಹೋಮ್: 70 ವರ್ಷದ ಮಹಿಳೆ ತನ್ನ 41 ವರ್ಷದ ಮಗನನ್ನು ಸುಮಾರು 28 ವರ್ಷಗಳ ಕಾಲ ಕೋಣೆಯಲ್ಲಿ ಕೂಡಿ ಹಾಕಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಸ್ವೀಡನ್ ರಾಜಧಾನಿ ಸ್ಟಾಕ್ಹೋಮ್‍ನ ಅಪಾರ್ಟ್‍ಮೆಂಟ್‍ನಲ್ಲಿ ಘಟನೆ ನಡೆದಿದ್ದು, ಮಹಿಳೆ ತನ್ನ ಮಗನನ್ನೇ 28 ವರ್ಷಗಳ ಕಾಲ ಕೋಣೆಯಲ್ಲಿ ಕೂಡಿ ಹಾಕಿ ವಿಕೃತಿ ಮೆರೆದಿದ್ದಾಳೆ. ಕಾನೂನುಬಾಹಿರವಾಗಿ ಕೂಡಿ ಹಾಕಿ ವ್ಯಕ್ತಿಯ ಸ್ವಾತಂತ್ರ್ಯ ಹರಣ ಹಾಗೂ ಆತನಿಗೆ ದೈಹಿಕ ಹಾನಿ ಮಾಡಿರುವುದು ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವ್ಯಕ್ತಿ ಕಾಣೆಯಾಗಿ ಬರೋಬ್ಬರಿ 28 ವರ್ಷಗಳು ಕಳೆದಿದ್ದು, ಆತ 13 ವರ್ಷದ ಬಾಲಕನಿರುವಾಗಲೇ ರಾಕ್ಷಸಿ ತಾಯಿ ಬಾಲಕನನ್ನು ಕೂಡಿ ಹಾಕಿದ್ದಳು. 40 ವರ್ಷವಾದರೂ ಮಹಿಳೆ ಮಾತ್ರ ವ್ಯಕ್ತಿಯನ್ನು ಬಂಧನದಿಂದ ಮುಕ್ತಗೊಳಿಸಿರಲಿಲ್ಲ. ಸಂಬಂಧಿಕರೊಬ್ಬರು ದಿಢೀರನೆ ಮನೆಗೆ ಭೇಟಿ ನೀಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ. 41 ವರ್ಷದ ವ್ಯಕ್ತಿಯನ್ನು ಕೂಡಿ ಹಾಕಿರುವುದು ತಿಳಿಯುತ್ತಿದ್ದಂತೆ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇಷ್ಟಾದರೂ ಮಹಿಳೆ ಯಾವುದೇ ತಪ್ಪು ಮಾಡಿಲ್ಲ ಎಂದು ವಾದಿಸಿದ್ದಾಳೆ. ಇದೀಗ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ದೈಹಿಕ ಗಾಯಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಲ್ಲದೆ ವ್ಯಕ್ತಿಗೆ ಈ ರೀತಿಯ ಗಾಯಗಳಾಗಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

70 ವರ್ಷದ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿ ಬಳಿಕ ಮನೆಗೆ ಆಗಮಿಸಿದಾಗ ಸಂಬಂಧಿ ಮಹಿಳೆ ವ್ಯಕ್ತಿಯನ್ನು ಕೂಡಿಹಾಕಿರುವುದನ್ನು ಗಮನಿಸಿದ್ದಾರೆ. ಭಾನುವಾರ ಸಂಬಂಧಿ ಫ್ಲ್ಯಾಟ್‍ಗೆ ತೆರಳಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಮುಖ್ಯದ್ವಾರ ಬೀಗ ಹಾಕದಿರುವುದನ್ನು ಕಂಡು ಒಳಗೆ ಪ್ರವೇಶಿಸಿದ್ದು, ಈ ವೇಳೆ ವ್ಯಕ್ತಿಯನ್ನು ಪತ್ತೆಹಚ್ಚಿದ್ದಾರೆ.

ಒಳಗೆ ಪ್ರವೇಶಿಸುತ್ತಿದ್ದಂತೆ ಎಲ್ಲೆಡೆ ಮೂತ್ರ, ಕೊಳಕು ಹಾಗೂ ಧೂಳು ತುಂಬಿತ್ತು. ಅಲ್ಲದೆ ಕೊಳೆತ ವಾಸನೆಯಿಂದಾಗಿ ಉಸಿರಾಡುವುದು ಸಹ ಕಷ್ಟವಾಗಿತ್ತು ಎಂದು ಸಂಬಂಧಿ ಮಹಿಳೆ ರೂಮ್ ಪ್ರವೇಶಿಸಿದಾಗಿನ ತನ್ನ ಅನುಭವವನ್ನು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಅಡುಗೆ ಮನೆಯಿಂದ ಶಬ್ದ ಬಂತು, ಬ್ಲಾಂಕೆಟ್ ಹಾಗೂ ದಿಂಬುಗಳ ಮೇಲೆ ಕುಳಿತಿದ್ದ ವ್ಯಕ್ತಿಯನ್ನು ಕಂಡೆ. ಅವನಿಗೆ ಹಲ್ಲುಗಳಿರಲಿಲ್ಲ, ಕಾಲುಗಳ ಮೇಲೆ ಗಾಯಗಳಿದ್ದವು. ನಿಧಾನವಾಗಿ ಮಾತನಾಡುತ್ತಿದ್ದ. ಬಳಿಕ ವೇಗವಾಗಿ ಏನೇನೋ ಮಾತನಾಡುತ್ತಿದ್ದ. ಆದರೂ ನಾನು ಅವನಿಗೆ ಹೆದರಲಿಲ್ಲ ಎಂದು ಮಹಿಳೆಯ ಹೇಳಿಕೆಯನ್ನಾಧರಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಧಿಕಾರಿಗಳು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ತಾಯಿ, ಮಗ ಹಾಗೂ ಸಾಕ್ಷಿದಾರರನ್ನು ವಿಚಾರಣೆ ನಡೆಸಲಾಗುತ್ತಿದೆ. ಬಳಿಕ ನೈಜ ಕಾರಣ ಏನೆಂದು ತಿಳಿಯಲಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Comments

Leave a Reply

Your email address will not be published. Required fields are marked *