IQ ಟೆಸ್ಟ್ ನಲ್ಲಿ ಐನ್‍ಸ್ಟೈನ್‍ರನ್ನೂ ಮೀರಿಸಿದ ಭಾರತೀಯ ಮೂಲದ ಬಾಲಕಿ

ಲಂಡನ್: ಭಾರತೀಯ ಮೂಲದ 12 ವರ್ಷದ ಬಾಲಕಿಯೊಬ್ಬಳು ಬ್ರಿಟಿಷ್ ಮೆನ್ಸಾ ಐಕ್ಯೂ ಪರೀಕ್ಷೆಯಲ್ಲಿ 162 ಪಾಯಿಂಟ್ ಗಳಿಸುವ ಮೂಲಕ ವಿಜ್ಞಾನಿ ಐನ್‍ಸ್ಟೈನ್‍ರನ್ನೂ ಮೀರಿಸಿದ್ದಾಳೆ.

ಇಂಗ್ಲೆಂಡ್‍ನ ಚೆಶೈರ್ ನಿವಾಸಿಯಾಗಿರೋ ಭಾರತೀಯ ಮೂಲದ ರಾಜಗೌರಿ ಪವಾರ್ ಈ ಕೀರ್ತಿಗೆ ಪಾತ್ರವಾಗಿದ್ದಾಳೆ. ಬ್ರಿಟಿಷ್ ಮೆನ್ಸಾ ಐಕ್ಯೂ ಪರೀಕ್ಷೆಯಲ್ಲಿ ಯಾರು ಬೇಕಾದ್ರೂ ಭಾಗವಹಿಸಿ ತಮ್ಮ ಬುದ್ಧಿವಂತಿಕೆಯನ್ನ ಪ್ರದರ್ಶಿಸಬಹುದು. ಐಕ್ಯೂ ಪರೀಕ್ಷೆ ಪ್ರಕ್ರಿಯೆಯ ಪ್ರಕಾರ ಒಬ್ಬರ ಬುದ್ಧಿವಂತಿಕೆಯನ್ನ ಅಳೆಯಲಾಗುತ್ತದೆ.

ರಾಜಗೌರಿ ಪವಾರ್ ಈ ಪರೀಕ್ಷೆಯಲ್ಲಿ ವಿಜ್ಞಾನಿಗಳಾದ ಆಲ್ಬರ್ಟ್ ಐನ್‍ಸ್ಟೈನ್ ಹಾಗೂ ಸ್ಟೀಫನ್ ಹಾಕಿಂಗ್‍ಗಿಂತಲೂ ಎರಡು ಪಾಯಿಂಟ್ಸ್ ಹೆಚ್ಚು ಗಳಿಸಿದ್ದಾಳೆ. ಇದೀಗ ರಾಜಗೌರಿಯನ್ನ ಹೈ-ಐಕ್ಯೂ ಸೊಸೈಟಿಯ ಸದಸ್ಯೆಯಾಗಲು ಆಹ್ವಾನಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರೋ ರಾಜಗೌರಿ, ನನಗಾಗ್ತಿರೋ ಸಂತೋಷವನ್ನ ಪದಗಳಲ್ಲಿ ಹೇಳೋಕೆ ಆಗ್ತಿಲ್ಲ. ವಿದೇಶಿ ನೆಲದಲ್ಲಿ ಭಾರತವನ್ನ ಪ್ರತಿನಿಧಿಸಿ ಇಂತಹ ಸಾಧನೆ ಮಾಡಿರುವುದು ನನಗೆ ಹೆಮ್ಮೆ ಎನಿಸುತ್ತಿದೆ ಎಂದಿದ್ದಾಳೆ.

ರಾಜಗೌರಿ ಕಳೆದ ತಿಂಗಳು ಮ್ಯಾಂಚೆಸ್ಟರ್‍ನಲ್ಲಿ ಬ್ರಿಟಿಷ್ ಮೆನ್ಸಾ ಐಕ್ಯೂ ಪರೀಕ್ಷೆಗೆ ಹಾಜರಾಗಿದ್ದಳು. 18 ವರ್ಷಕ್ಕಿಂತ ಕೆಳಗಿನ ವಯೋಮಾನದವರಿಗೆ ಇದು ಅತ್ಯಂತ ದೊಡ್ಡ ಐಕ್ಯೂ ಪರೀಕ್ಷೆಯಾಗಿದೆ. ಪತ್ರಿಕೆಯೊಂದರ ವರದಿಯ ಪ್ರಕಾರ ಈ ಪರೀಕ್ಷೆ ತೆಗೆದುಕೊಂಡು ಹೆಚ್ಚಿನ ಅಂಕ ಗಳಿಸುವ ಶೇ. 1ರಷ್ಟು ಜನರಲ್ಲಿ ರಾಜಗೌರಿ ಒಬ್ಬಳಾಗಿದ್ದಾಳೆ. ಈ ಪರೀಕ್ಷೆಯಲ್ಲಿ 140 ಅಂಕ ಪಡೆದರೆ ಅವರನ್ನ ಜೀನಿಯಸ್(ಅತ್ಯಂತ ಬುದ್ಧಿಶಾಲಿಗಳು) ಎಂದು ಪರಿಗಣಿಸಲಾಗುತ್ತದೆ. ಹೀಗಿರುವಾಗಿ ರಾಜಗೌರಿ ಬರೋಬ್ಬರಿ 162 ಅಂಕ ಪಡೆದಿದ್ದಾಳೆ. ಇಡೀ ವಿಶ್ವದಲ್ಲಿ ಹೆಚ್ಚಿನ ಅಂಕ ಪಡೆದ 20 ಸಾವಿರ ಜನರಲ್ಲಿ ಈಗ ರಾಜಗೌರಿಯೂ ಒಬ್ಬಳಾಗಿದ್ದಾಳೆ.

ರಾಜಗೌರಿಯ ತಂದೆ ಡಾ. ಸೂರಜ್‍ಕುಮಾರ್ ಪವಾರ್ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿಜ್ಞಾನಿಯಾಗಿದ್ದಾರೆ. ಇವರು ಪುಣೆಯ ಬಾರಾಮತಿ ಮೂಲದವರಾಗಿದ್ದು, ಮಗಳ ಸಾಧನೆಯ ಬಗ್ಗೆ ಕೇಳಿ ಸಂತಸಪಟ್ಟಿದ್ದಾರೆ. ಟಾಪ್ ಒಂದು ಪರ್ಸೆಂಟ್ ಅಂಕಗಳೊಂದಿಗೆ ನನ್ನ ಮಗಳು ಮುಂಚೂಣಿಯಲ್ಲಿದ್ದು, ಅತ್ಯಂತ ಕಿರಿಯ ವಯಸ್ಸಿನಲ್ಲೇ ಈ ಸಾಧನೆ ಮಾಡಿದವರಲ್ಲಿ ಒಬ್ಬಳಾಗಿದ್ದಾಳೆ ಎಂದು ಸೂರಜ್ ಕುಮಾರ್ ಹೇಳಿದ್ದಾರೆ.

ನನಗೆ ಭೌತಶಾಸ್ತ್ರ, ಪರಿಸರ ಮತ್ತು ಖಗೋಳಶಾಸ್ತ್ರದಲ್ಲಿ ಆಸಕ್ತಿ ಇದೆ. ಮುಂದೆ ವೈದ್ಯಕೀಯ ಕ್ಷೇತ್ರದಲ್ಲಿ ವಿದ್ಯಾಭ್ಯಾಸ ಮಾಡಲು ಇಚ್ಛಿಸಿದ್ದೇನೆ ಅಂತ ರಾಜಗೌರಿ ಹೇಳಿದ್ದಾಳೆ. ಇಂಗ್ಲೆಂಡ್‍ನ ಪ್ರತಿಷ್ಠಿತ ಸಂಸ್ಥೆಯಾದ ಆಲ್ಟ್ರಿಂಚಾಮ್ ಗಲ್ರ್ಸ್ ಗ್ರಾಮರ್ ಸ್ಕೂಲ್‍ನಲ್ಲಿ ಪ್ರವೇಶಾತಿ ಪಡೆಯಲು ನಾನು ಪ್ರವೇಶ ಪರೀಕ್ಷೆಗೆ ತಯಾರಾಗುತ್ತಿದ್ದೆ. ನನ್ನ ಪೋಷಕರು ಬ್ರಿಟಿಷ್ ಮೆನ್ಸಾ ಐಕ್ಯೂ ಪರೀಕ್ಷೆ ತೆಗೆದುಕೊಳ್ಳುವಂತೆ ಸೂಚಿಸಿದ್ರು. 10.2 ವರ್ಷ ವಯಸ್ಸು ಮೀರಿದ ಯಾರಾದ್ರೂ ಈ ಪರೀಕ್ಷೆ ತೆಗೆದುಕೊಳ್ಳಬಹುದು. ಪರೀಕ್ಷೆ ತುಂಬಾ ಸವಾಲಿನದ್ದಾಗಿತ್ತು. ಆರಂಭದಲ್ಲಿ ಸುಲಭ ಎನಿಸಿತು. ಆದ್ರೆ ಕೊನೆಯಲ್ಲಿ ಕಠಿಣವಾಯಿತು. ನಿಗದಿತ ಸಮಯದಲ್ಲಿ ಪರೀಕ್ಷೆ ಮುಗಿಸುವುದೇ ದೊಡ್ಡ ಸವಾಲಾಗಿತ್ತು. ಸಮಯವನ್ನ ಮ್ಯಾನೇಜ್ ಮಾಡುವ ಕೌಶಲ್ಯ ಹಾಗೂ ಸರಿಯಾದ ಉತ್ತರ ನೀಡುವುದರ ಆಧಾರದ ಮೇಲೆಯೇ ಮೌಲ್ಯಮಾಪನ ಮಾಡಲಾಗುತ್ತದೆ ಅಂತ ರಾಜಗೌರಿ ಹೇಳಿದ್ದಾಳೆ.

Comments

Leave a Reply

Your email address will not be published. Required fields are marked *