ಮುದ್ದಿನಿಂದ ಸಾಕಿದ ಇಲಿ ಸಾವನ್ನಪ್ಪಿದ್ದಕ್ಕೆ 12 ವರ್ಷದ ಬಾಲಕಿ ಆತ್ಮಹತ್ಯೆ!

ಭೋಪಾಲ್: ಸಾಕಿದ ಮುದ್ದಿನ ಇಲಿ ಸಾವನ್ನಪ್ಪಿದ್ದಕ್ಕೆ ಮನನೊಂದು 12 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಅಯೋಧ್ಯಾ ನಗರದಲ್ಲಿ ನಡೆದಿದೆ.

ಮಹೇಂದ್ರ ಸಿಂಗ್ ರಾಥೋರ್ ಅವರ ಪುತ್ರಿ ದಿವ್ಯಾಂಶಿ ರಾಥೋರ್ (12) ಆತ್ಮಹತ್ಯೆಗೆ ಶರಣಾದ ಬಾಲಕಿ. ಈಕೆ ಶನಿವಾರ ತಮ್ಮ ಸುರ್ಬಿ ವಿಹಾರ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ದಿವ್ಯಾಂಶಿಗೆ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಹೀಗಾಗಿ ಕೆಲ ದಿನಗಳ ಹಿಂದೆ ಆಕೆ ಬಿಳಿ ಇಲಿಯೊಂದನ್ನು ಖರೀದಿಸಿದ್ದಳು. ಅದರ ಜೊತೆಗೆ ಆಕೆಗೆ ವಿಶೇಷ ಅಕ್ಕರೆ ಬೆಳೆದಿತ್ತು. ಆದರೆ ಅದು ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದರಿಂದ ಬಾಲಕಿ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ಬಾಲಕಿ ಕುಟುಂಬದವರು ತಿಳಿಸಿದ್ದಾರೆ ಎಂದು ಪೊಲೀಸ್ ಬಾಲ್‍ಜೀತ್ ಸಿಂಗ್ ಹೇಳಿದ್ದಾರೆ.

ಶುಕ್ರವಾರ ಸಾಕಿದ ಇಲಿ ಸಾವನ್ನಪ್ಪಿದೆ. ಬಾಲಕಿ ಸತ್ತ ಇಲಿಯನ್ನು ಬಿಸಾಡಲು ಬಿಡದೆ ಮನೆಯಲ್ಲೇ ಅದಕ್ಕೆ ಗೋರಿ ಮಾಡಿ ಹೂವಿನಿಂದ ಅಲಂಕರಿಸಿದ್ದಳು. ಆದರೆ ಇದ್ದಕ್ಕಿದ್ದಂತೆ ಶನಿವಾರ ಮಧ್ಯಾಹ್ನ ರೂಂಗೆ ಹೋಗಿ ಬಾಗಿಲ ಚಿಲಕ ಹಾಕಿಕೊಂಡಿದ್ದಾಳೆ. ನಂತರ ತಾಯಿ ಹೋಗಿ ಕರೆದರೂ ಬಾಗಿಲು ತೆಗೆಯಲಿಲ್ಲ. ಕೊನೆಗೆ ಮನೆಯವರು ಭಯಗೊಂಡು ನೆರೆಹೊರೆಯವರ ಸಹಾಯ ಪಡೆದು ಬಾಗಿಲು ಮುರಿದು ಒಳಗೆ ಹೋಗಿದ್ದಾರೆ. ಈ ವೇಳೆ ಬಾಲಕಿ ಆಕೆಯ ದುಪ್ಪಟ್ಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ ಎಂದು ಸಿಂಗ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *