ತಲೆ ಸುತ್ತಿ ಬಿದ್ದ ಮಗ ಆಸ್ಪತ್ರೆಯಲ್ಲಿ ಸಾವು – ಮೃತದೇಹ ಕೊಡದೆ ಪೊಲೀಸ್ರನ್ನ ಕರೆಸಿದ್ರು!

ಬೆಂಗಳೂರು: ವೈದ್ಯೋ ನಾರಾಯಣ ಹರಿ ಅನ್ನೋ ಮಾತಿದೆ. ಆದರೆ ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕ ಮೃತಪಟ್ಟಿದ್ದರೂ, ಬಾಲಕನ ಮೃತದೇಹವನ್ನ ಸಹ ಕೊಡದೆ ವೈದ್ಯರು ದರ್ಪ ತೋರಿದ್ದಾರೆ.

ಮಹಾಲಕ್ಷ್ಮಿ ಲೇಔಟ್ ಸುರೇಶ್ ಮತ್ತು ಅಂಜಲಿಯ ದಂಪತಿಯ 12 ವರ್ಷದ ಮಗೇಂದ್ರನ್ ವೈದ್ಯರ ಬೇಜಾವ್ದಾರಿತನಕ್ಕೆ ಮೃತಪಟ್ಟ ಬಾಲಕ.

ಗುರುವಾರ ಬೆಳಗ್ಗೆ ತಲೆ ಸುತ್ತಿ ಬಿದ್ದ ಎಂದು ಮಗೇಂದ್ರನ್ ನನ್ನು ಗೋರಗುಂಟೆಪಾಳ್ಯದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದೆವು. ಆದರೆ ಆಸ್ಪತ್ರೆಯ ಸಿಬ್ಬಂದಿ ಮಾತ್ರ ಬಿಲ್ ಕಟ್ಟುವವರೆಗೆ ಚಿಕಿತ್ಸೆಯನ್ನು ಕೊಡಲಿಲ್ಲ. ಬಳಿಕ 30 ಸಾವಿರ ಹಣ ಕಟ್ಟಿದ ಮೇಲೆ ಚಿಕಿತ್ಸೆ ಶುರು ಮಾಡಿದ್ದಾರೆ. ನಾವು ಮಗವನ್ನು ಮುಟ್ಟಿದಾಗ ಆತನ ದೇಹ ತಣ್ಣಾಗಿರುವುದು ಕಂಡು ಬಂದಿದೆ. ಈ ವೇಳೆ ಏನಾಗಿದೆ ಹೇಳಿ ಅಂತಾ ಕೇಳಿದೆವು. ಆಗ ವೈದ್ಯರು ಬಾಲಕ ಮೃತಪಟ್ಟಿದ್ದಾನೆ ಅಂತಾ ಹೇಳಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ.

ಇನ್ನು ಬಾಲಕ ಮಧ್ಯಾಹ್ನವೇ ಮೃತಪಟ್ಟಿದ್ದು, ಮಗನ ಮೃತದೇಹ ಕೊಡಿ ಅಂತಾ ಕೇಳಿದರೆ 5 ನಿಮಿಷ, 10 ನಿಮಿಷ ಅಂತಾ ಹೇಳಿಕೊಂಡು ಬಂದಿದ್ದಾರೆ. ರಾತ್ರಿ 8 ಗಂಟೆ ಕಳೆದ್ರೂ ಬಾಲಕನ ಮೃತದೇಹವನ್ನ ಕೊಡದೆ ಪೊಲೀಸರಿಗೆ ಕರೆ ಮಾಡಿದ್ದಾರೆ. ಇನ್ನೂ ಪೊಲೀಸರನ್ನ ಕೇಳಿದರೆ ಇದು ನಮ್ಮ ವ್ಯಾಪ್ತಿಗೆ ಬರಲ್ಲ. ನಮಗೆ ಕರೆ ಬಂತು, ಗಲಾಟೆಯಾಗುತ್ತದೆ ಅಂತಾ ಬಂದಿದ್ದೇವೆ ಅಷ್ಟೇ ಎಂದು ಹೇಳಿದ್ದಾರೆ.

ಮಗ ಸಾಯಲು ವೈದ್ಯರೇ ಕಾರಣ. ನಾವು ಮೃತ ದೇಹ ಕೇಳಿದರೆ ಪೋಲೀಸರನ್ನ ಕರೆಸಿದ್ದಾರೆ. ಇದು ಏನು ಆತ್ಯಹತ್ಯೆ ಅಥವಾ ಅಪಘಾತ ಅಲ್ಲ. ಆದರು ಪೊಲೀಸರನ್ನು ಕರೆಸಿ ವೈದ್ಯರು ತಮ್ಮ ತಪ್ಪನ್ನ ಮುಚ್ಚಲು ಈ ರೀತಿ ಮಾಡಿದ್ದಾರೆ. ಮಗು ಯಾಕೆ ಮೃತಪಟ್ಟಿದೆ ಅಂತಾ ಕೇಳಿದರೆ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ ಅಂತಿದ್ದಾರೆ ಎಂದು ಮಗೇಂದ್ರನ್ ತಂದೆ ಶರತ್ ನೋವಿನಿಂದ ಹೇಳಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *