ಗ್ರಾಮದ ಬಳಿ 12 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ- ರಕ್ಷಣೆ ವಿಡಿಯೋ ವೈರಲ್

ಗಾಂಧಿನಗರ: ಜನವಸತಿ ಪ್ರದೇಶಕ್ಕೆ ಧಾವಿಸಿದ್ದ 12 ಅಡಿ ಉದ್ದದ ಮೊಸಳೆಯನ್ನು ರಕ್ಷಿಸಲಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗುಜರಾತ್‍ನ ವಡೋದರಾ ಬಳಿಯ ರಾವಲ್ ಗ್ರಾಮದ ಬಳಿ ಮೊಸಳೆ ಪ್ರತ್ಯಕ್ಷವಾಗಿದ್ದು, ವನ್ಯಜೀವಿ ಸಂರಕ್ಷಕರು ರಕ್ಷಿಸಿ ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯು ಸುಮಾರು 5-6 ಗಂಟೆಗಳ ಕಾಲ ನಡೆದಿದ್ದು, ಕಡೆಗೂ ಮೊಸಳೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಬೃಹತ್ ಮೊಸಳೆಯು ರಾವಲ್ ಗ್ರಾಮದ ಬಳಿ ಇರುವ ನರ್ಮದಾ ನದಿ ಕ್ಯಾನಲ್‍ನ ಸೋಲಾರ್ ಪ್ಲಾಂಟ್‍ನಿಂದ ಬಂದಿದ್ದು, ಗ್ರಾಮಸ್ಥರು ಈ ನೀರನ್ನು ಕೃಷಿಗಾಗಿ ಬಳಸುತ್ತಾರೆ.

ನರ್ಮದಾ ಕ್ಯಾನಲ್ ಸೋಲಾರ್ ಪ್ಲಾಂಟ್‍ನ ಎಂಜಿನಿಯರ್ ಬೆಳಗ್ಗೆ 10.30ಕ್ಕೆ ಕರೆ ಮಾಡಿ ರಾವಲ್ ಗ್ರಾಮದ ಬಳಿ 12 ಅಡಿ ಮೊಸಳೆ ಪ್ರತ್ಯಕ್ಷವಾಗಿರುವುದನ್ನು ತಿಳಿಸಿದರು. ತಕ್ಷಣವೇ ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ಪ್ರಾರಂಭಿಸಿದೆವು. ಮೊಸಳೆಯನ್ನು ರಕ್ಷಿಸಲು ಐದರಿಂದ ಆರು ತಾಸು ಸಮಯ ಹಿಡಿಯಿತು ಎಂದು ವನ್ಯ ಜೀವಿ ಸಂರಕ್ಷಕ ಹೇಮಂತ್ ವಧ್ವಾನ ತಿಳಿಸಿದ್ದಾರೆ.

ಬೃಹತ್ ಮೊಸಳೆ ಕಾಣುತ್ತಿದ್ದಂತೆ ಗ್ರಾಮಸ್ಥರು ಭಯಭೀತರಾಗಿದ್ದು, ಕೂಗಾಡಲು ಪ್ರಾರಂಭಿಸಿದ್ದಾರೆ. ನಂತರ ವನ್ಯ ಜೀವಿ ಸಂರಕ್ಷಣಾ ಕೇಂದ್ರಕ್ಕೆ ಮಾಹಿತಿ ನೀಡಿದ್ದು, ಸಿಬ್ಬಂದಿ ಆಗಮಿಸಿ ಮೊಸಳೆಯನ್ನು ಹಿಡಿದಿದ್ದಾರೆ. ಐದಾರು ಗಂಟೆಗಳ ಕಾಲ ಹರ ಸಾಹಸ ಪಟ್ಟು ಕಾರ್ಯಾಚರಣೆ ನಡೆಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಕ್ಷಿಸಿದ ಮೊಸಳೆಯನ್ನು ಹಲವು ಮೊಸಳೆಗಳಿರುವ ಕೆರೆಗೆ ಬಿಡಲಾಗಿದೆ. ಈ ರೀತಿ ನಡೆಯುತ್ತಿರುವ ಮೂರನೇ ಘಟನೆ ಇದಾಗಿದೆ. ಇದೇ ಸ್ಥಳದಲ್ಲಿ ಕಳೆದ ವರ್ಷ ಇಂತಹದ್ದೇ ಘಟನೆ ನಡೆದಿತ್ತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *