11 ಸಾವಿರ ಲೀ. ಮದ್ಯದ ಬಾಟ್ಲಿ ಮೇಲೆ ರೋಡ್ ರೋಲರ್ ಹರಿಸಿದ್ರು!

-ಹೊಳೆಯಂತೆ ಹರಿದ ಮದ್ಯ

ಪಾಟ್ನಾ: ಅಕ್ರಮವಾಗಿ ಸಾಗಿಸುತ್ತಿದ್ದ 11 ಸಾವಿರ ಲೀಟರ್ ಮದ್ಯವನ್ನು ಚುನಾವಣಾ ಅಧಿಕಾರಿಗಳು ನಾಶ ಮಾಡಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ರಾಜ್ಯದ ಗಡಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಉತ್ತರ ಪ್ರದೇಶದಿಂದ ಬಿಹಾರಕ್ಕೆ ಬರುತ್ತಿದ್ದ ವಿವಿಧ ಬ್ರ್ಯಾಂಡ್ ಗಳ ಅಕ್ರಮ ಮದ್ಯವನ್ನು ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ನಾಶಗೊಳಿಸಲಾಗಿದೆ.

ಬಿಹಾರದ ಕೈಮೂರ್ ಎಂಬಲ್ಲಿ ಮದ್ಯ ವಿತರಣೆ ಮಾಡಲಾಗುತ್ತಿರುವ ವಿಷಯ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಕೂಡಲೇ ದಾಳಿ ನಡೆಸಿದಾಗ ಅಪಾರ ಪ್ರಮಾಣದ ಮದ್ಯವನ್ನು ವಶಕ್ಕೆ ಪಡಿಸಿಕೊಂಡಿದ್ದರು. ಪ್ರತ್ಯೇಕ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಮದ್ಯವನ್ನು ಒಂದೆಡೆ ಸೇರಿಸಿ ನಾಶ ಮಾಡಲಾಗಿದೆ. ಮದ್ಯ ನಾಶಗೊಳಿಸಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಬಿಹಾರ ಚುನಾವಣೆಯಲ್ಲಿ ಮದ್ಯ ಹಂಚುವಿಕೆ ಸೇರಿದಂತೆ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದಿಲ್ಲ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಹಾಗೆ ಬಿಹಾರ ರಾಜ್ಯ ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲಿ ಚೆಕ್‍ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಸದ್ಯ ಲಭ್ಯವಾಗಿರುವ ಮದ್ಯ ರಾಜ್ಯಕ್ಕೆ ಕಳ್ಳ ಮಾರ್ಗ ಮತ್ತು ಗ್ರಾಮೀಣ ರಸ್ತೆಗಳ ಮೂಲಕ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಕೈಮೂರು ಎಸ್‍ಪಿ ದಿಲನ್‍ವಾಜ್ ಅಹ್ಮದ್ ಹೇಳಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆ ಮೂರು ಹಂತಗಳಲ್ಲಿ ನಡೆಯಲಿದ್ದು, ಅಕ್ಟೋಬರ್ 28ರಂದು ಮೊದಲ ಹಂತದಲ್ಲಿ 16 ಜಿಲ್ಲೆಯ 71 ಕ್ಷೇತ್ರಗಳಿಗೆ, 31 ಸಾವಿರ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಎರಡನೇ ಹಂತದ ಚುನಾವಣೆ ನವೆಂಬರ್ 3ರಂದು ನಡೆಯಲಿದ್ದು, 17 ಜಿಲ್ಲೆಯ 94 ಕ್ಷೇತ್ರಗಳಿಗೆ 42 ಸಾವಿರ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.

ಮೂರನೇ ಹಂತದ ಚುನಾವಣೆ ನವೆಂಬರ್ 7ರಂದು 15 ಜಿಲ್ಲೆಯ 78 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು 33 ಸಾವಿರ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಮೂರು ಹಂತದ ಮತದಾನದ ಬಳಿಕ ನವೆಂಬರ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.

Comments

Leave a Reply

Your email address will not be published. Required fields are marked *